ಕಲ್ಯಾಣ ಕರ್ನಾಟಕದ 4,424 ಪಿಎಸ್‌ಟಿ ಹುದ್ದೆಗಳನ್ನು ಯಥಾವತ್ತಾಗಿ ಭರ್ತಿ ಮಾಡಲು ಆಗ್ರಹ

ಕಲ್ಯಾಣ ಕರ್ನಾಟಕದ 4,424 ಪಿಎಸ್‌ಟಿ ಹುದ್ದೆಗಳನ್ನು ಯಥಾವತ್ತಾಗಿ ಭರ್ತಿ ಮಾಡಲು ಆಗ್ರಹ

ಕಲ್ಯಾಣ ಕರ್ನಾಟಕದ 4,424 ಪಿಎಸ್‌ಟಿ ಹುದ್ದೆಗಳನ್ನು ಯಥಾವತ್ತಾಗಿ ಭರ್ತಿ ಮಾಡಲು ಆಗ್ರಹ

ಬೆಂಗಳೂರು, ಜೂನ್ 25: ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸರ್ಕಾರದಿಂದ ಅನುಮೋದನೆ ಪಡೆದಿರುವ 4,424 ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ (ಪಿಎಸ್‌ಟಿ) ಹುದ್ದೆಗಳನ್ನು ಯಾವುದೇ ಕಡಿತಗೊಳಿಸದೆ ಯಥಾವತ್ತಾಗಿ ಭರ್ತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಶಿಕ್ಷಕ ಆಕಾಂಕ್ಷಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಇಂದು ನಗರದ ಗೃಹ ಸಚಿವರ ಕಚೇರಿಯಲ್ಲಿ ಶಿಕ್ಷಕ ಆಕಾಂಕ್ಷಿಗಳ ಪರವಾಗಿ ಕಾಂತಕುಮಾರ್ ಆರ್. ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿಯಲ್ಲಿ, ಕಳೆದ 12 ವರ್ಷಗಳಿಂದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ನಡೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಎರಡು ಬಜೆಟ್‌ಗಳಲ್ಲಿ 4,424 ಪಿಎಸ್‌ಟಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದರು. ಆದರೆ ಒಳಮೀಸಲಾತಿ ಸೇರಿದಂತೆ ವಿವಿಧ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಶಿಕ್ಷಣ ಇಲಾಖೆ ಈ ಹುದ್ದೆಗಳನ್ನು ಜಿಪಿಟಿ ಹಂತದ ಹುದ್ದೆಗಳಾಗಿ ಪರಿವರ್ತಿಸಿ ನೇಮಕಾತಿ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಆಕಾಂಕ್ಷಿಗಳಲ್ಲಿ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಲ್ಯಾಣ ಕರ್ನಾಟಕದ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಾವಿರಾರು ಪಿಎಸ್‌ಟಿ ಹುದ್ದೆಗಳು ಖಾಲಿ ಇವೆ. ಕೆಲವು ಶಾಲೆಗಳು ‘ಶೂನ್ಯ ಶಿಕ್ಷಕ’ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, 2015ರ ವೃಂದ ಮತ್ತು ನೇಮಕಾತಿ (ಸಿ & ಆರ್) ನಿಯಮಗಳ ಪ್ರಕಾರ ಪಿಎಸ್‌ಟಿ ಹುದ್ದೆಗಳನ್ನು ಸಾಮಾನ್ಯ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಾಗಿಯೇ ಭರ್ತಿ ಮಾಡಬೇಕು. ಪಿಯುಸಿ ಅಂಕಗಳಿಗೆ ಶೇ.50ರಷ್ಟು ತೂಕ ನೀಡುವ ಪ್ರಸ್ತುತ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಶಿಕ್ಷಕ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಪಾಲಕರು, ಶಿಕ್ಷಕ ಆಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಪರವಾಗಿ ಈ ಮನವಿ ಸಲ್ಲಿಸಲಾಗಿದ್ದು, ಅನುಮೋದಿತ 4,424 ಪಿಎಸ್‌ಟಿ ಹುದ್ದೆಗಳನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡದೆ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಶಿಕ್ಷಣ ಕ್ಷೇತ್ರದ ಹಿತವನ್ನು ಕಾಪಾಡುವಂತೆ ಸರ್ಕಾರಕ್ಕೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

"ಶಿಕ್ಷಕರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು, ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡುತ್ತೇನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು" ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದರು.