ಮೃತ ಭುವನ ಕುಟುಂಬಕ್ಕೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಶೀಘ್ರ ಒದಗಿಸಲು : ತುಮಕೂರು ಜಿಲ್ಲಾಧಿಕಾರಿ ಭರವಸೆ
ಮೃತ ಭುವನ ಕುಟುಂಬಕ್ಕೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಶೀಘ್ರ ಒದಗಿಸಲು : ತುಮಕೂರು ಜಿಲ್ಲಾಧಿಕಾರಿ ಭರವಸೆ
ಬೆಂಗಳೂರು, ಜು. 7: ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮೃತಪಟ್ಟ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯ ಗ್ರಾಮ ಆಡಳಿತ ಅಧಿಕಾರಿ (VAO) ದಿವಂಗತ ಟಿ. ಭುವನ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ದೂರವಾಣಿ ಮೂಲಕ ತುಮಕೂರು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಮೃತರ ಕುಟುಂಬಕ್ಕೆ ಸರ್ಕಾರ, ಚುನಾವಣಾ ಆಯೋಗ, ವೇತನ ಪ್ಯಾಕೇಜ್ ಬ್ಯಾಂಕ್ ಹಾಗೂ ಇತರೆ ಯೋಜನೆಗಳಡಿ ದೊರೆಯುವ ಪರಿಹಾರ, ವಿಮೆ, ಆರ್ಥಿಕ ನೆರವು ಮತ್ತು ಸೇವಾ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ತುಮಕೂರು ಜಿಲ್ಲಾಧಿಕಾರಿಯವರು, ಮೃತರ ಕುಟುಂಬಕ್ಕೆ ಕಾನೂನುಬದ್ಧವಾಗಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಶೀಘ್ರವಾಗಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ದಿವಂಗತ ಟಿ. ಭುವನ ಅವರ ತಂದೆ ರಮೇಶ್ ಕುಮಾರ್, ತಾಯಿ ಸರೋಜಾ, ಸಹೋದರ ಕಾರ್ತಿಕ್ ಹಾಗೂ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು ಎಂದು ಹೇಳಿದರು.
