ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ ( ವಿಕಸನಕ್ಕಾಗಿ ಪ್ರಯಾಣ)

ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ ( ವಿಕಸನಕ್ಕಾಗಿ ಪ್ರಯಾಣ)

ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ( ವಿಕಸನಕ್ಕಾಗಿ ಪ್ರಯಾಣ)

ಬಿಡುವಿಲ್ಲದ ಜೀವನಶೈಲಿಯಿಂದ ಮನುಷ್ಯನ ಜೀವನದಲ್ಲಿ ವಿಶ್ರಾಂತಿ ಮತ್ತು ಮನರಂಜನೆ ಇತ್ತೀಚಿಗೆ ತೀರಾ ಇಳಿಮುಖವಾಗುತ್ತಾ ಸಾಗುತ್ತಿದೆ. ಇದು ಹೀಗೆ ಮುಂದುವರೆದರೆ ಅವನ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಹಾಗಾಗಿ ಆಗಾಗ ಒಂದಿಷ್ಟು ಪ್ರವಾಸಕ್ಕೆ ಆತ ಆದ್ಯತೆ ನೀಡಲೇಬೇಕು ಆಗ ಉತ್ಸಾಹ, ಉಲ್ಲಾಸ ಮನವತುಂಬಿ ಬದುಕು ಚೈತನ್ಯಮಯವಾಗಿಸುವಲ್ಲಿ ಸಹಕಾರಿಯಾಗುತ್ತದೆ.

ಪ್ರವಾಸವೆಂಬುದು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ.ತಾನಿರುವ ಸ್ಥಳದಿಂದ ಒಂದಿಷ್ಟು ದೂರ ಸಾಗಿ ಒಂದೆರಡು ದಿವಸ ಅಥವಾ ಅದಕ್ಕಿಂತ ಹೆಚ್ಚಿಗೆ ಸಮಯ ಕುಟುಂಬ, ಮಿತ್ರರು ಅಥವಾ ಸಹೋದ್ಯೋಗಿಗಳೊಂದಿಗೆ ಕಳೆಯುವುದಾಗಿದೆ. ಜನರು ಪ್ರಸ್ತುತ ದಿನಗಳಲ್ಲಿ ಪ್ರವಾಸಕ್ಕೆ ಪ್ರಾಮುಖ್ಯವನ್ನು ನೀಡುತ್ತಾ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪಿಯರೆ ಬರ್ನಾಡೊ ಅವರ ಪ್ರಕಾರ "ಪ್ರಯಾಣ ಮಾಡುವುದು ವಿಕಾಸನಗೊಳ್ಳುವುದಾಗಿದೆ".

ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27ರಂದು ಆಚರಿಸಲಾಗುತ್ತಿದೆ. 2024ರಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಯೋಜಿಸಲು ಜಾರ್ಜಿಯಾವನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರದ ವಿಸ್ತರಿಸುತ್ತಿರುವ ಜಾಗತಿಕ ಪ್ರವಾಸೋದ್ಯಮ ಪ್ರಭಾವವನ್ನು ಒತ್ತಿ ಹೇಳುತ್ತದೆ. ಇಲ್ಲಿ ಆಯ್ಕೆ ಮಾಡಿರುವ ಥೀಮ್ "ಶಾಂತಿ ಮತ್ತು ಪ್ರವಾಸೋದ್ಯಮ"ವಾಗಿದೆ.

1980 ರಲ್ಲಿ ಸ್ಥಾಪಿತವಾದ ವಿಶ್ವ ಪ್ರವಾಸೋದ್ಯಮ ದಿನ ಒಂದು ನಿರ್ಣಾಯಕ ಘಟನೆಯಾಗಿ ವಿಕಸನಗೊಂಡಿತು. ಇದು ರಾಷ್ಟ್ರ ರಾಷ್ಟ್ರಗಳ ನಡುವೆ ಸಹಕಾರ ಬೆಳೆಸುವಲ್ಲಿ, ಸಾಂಸ್ಕೃತಿಕ ತಿಳುವಳಿಕೆ ಹೆಚ್ಚಿಸುವಲ್ಲಿ, ಆರ್ಥಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಯಿತು. ಜೊತೆಗೆ ವಿಶ್ವಶಾಂತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ 2024ರ ಮೊದಲ ತ್ರೈಮಾಸಿಕದಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮವು 97% ರಷ್ಟು ಪೂರ್ವ ಸಾಂಕ್ರಾಮಿಕ ಮಟ್ಟವನ್ನು ತಲುಪಿತು. 285 ಮಿಲಿಯನ್ ಪ್ರಯಾಣಿಕರು ಜನವರಿ ಮತ್ತು ಮಾರ್ಚ್ 2024ರ ನಡುವೆ ವಿದೇಶಿ ಪ್ರವಾಸವನ್ನ ಮಾಡಿದರು.ಇದು 2023ರಲ್ಲಿ ಇದೆ ಅವಧಿಗೆ ಹೋಲಿಸಿದರೆ 20 ಪ್ರತಿಶತ ಹೆಚ್ಚಳವನ್ನು ಸೂಚಿಸುತ್ತದೆ. 

ವಿಶ್ವ ಪ್ರವಾಸೋದ್ಯಮ ದಿನವು ರಾಷ್ಟ್ರಗಳು ಒಟ್ಟಾಗಿ ಸೇರಲು ಮತ್ತು ಪ್ರವಾಸೋದ್ಯಮದ ಮಹತ್ವವನ್ನು ಆಚರಿಸಲು ಸಾಮಾನ್ಯ ವೇದಿಕೆಯನ್ನು ಒದಗಿಸುವ ಮೂಲಕ ಜಾಗತಿಕ ಸಹಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಸಹಯೋಗವು ಗಡಿಗಳನ್ನ ಮೀರಿ ವಿಸ್ತರಿಸುತ್ತಿದೆ.

 ಜಾಗತಿಕ ಸಂವಾದವನ್ನು ಸುಗಮಗೊಳಿಸುವ ಮೂಲಕ, ಸಾಮಾನ್ಯ ಸವಾಲುಗಳನ್ನು ಎದುರಿಸಲು ದೇಶಗಳು ಒಟ್ಟಾಗಿ ಕೆಲಸ ಮಾಡಲು ಈ ದಿನವೂ ಪ್ರೋತ್ಸಾಹಿಸುತ್ತದೆ.ಹಾಗೆಯೇ ಇದು ಏಕತೆ ಮತ್ತು ಹಂಚಿಕೆಯ ಜವಾಬ್ದಾರಿಯನ್ನು ಬೆಳೆಸುತ್ತದೆ. ಪ್ರವಾಸೋದ್ಯಮವು ವೈವಿಧ್ಯಮಯ ಹಿನ್ನೆಲೆಯ ಜನರನ್ನ ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಗೆ ಆಳವಾದ ಮೆಚ್ಚುಗೆಯನ್ನು ನೀಡುತ್ತದೆ. ಇನ್ನು ಶ್ರೀಮಂತ ಜನರು ಹೆಚ್ಚಾಗಿ ಮಹಾನ್ ಕಟ್ಟಡಗಳು ಹಾಗೂ ಕಲಾಕೃತಿಗಳನ್ನು ನೋಡಲು, ಹೊಸ ಭಾಷೆ, ಹೊಸ ಸಾಂಸ್ಕೃತಿಗಳ ಅನುಭವ ಹೊಂದಲು,ಅಡುಗೆ ರುಚಿ ಸವಿಯಲು ಜಗತ್ತಿನ ದೂರ ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ.

ಪ್ರವಾಸೋದ್ಯಮದಲ್ಲಿ ಕೃಷಿ, ಅಡುಗೆ,ಸಾಂಸ್ಕೃತಿಕ, ಪರಿಸರ, ಪರಂಪರೆ,ವೈದ್ಯಕೀಯನೌಕಯಾನ, ಧಾರ್ಮಿಕ,ಬಾಹ್ಯಾಕಾಶ ಮತ್ತು ವನ್ಯಜೀವಿ ಪ್ರವಾಸೋದ್ಯಮ ಎಂಬ ಪ್ರಕಾರಗಳಿವೆ.

2023ರಲ್ಲಿ ಪ್ರವಾಸಿಗರು ಭೇಟಿ ಕೊಟ್ಟ ಟಾಪ್ 10 ದೇಶಗಳು ಫ್ರಾನ್ಸ್, ಸ್ಪೇನ್, ಅಮೆರಿಕ, ಇಟಲಿ, ಟರ್ಕಿ, ಮೆಕ್ಸಿಕೋ, ಇಂಗ್ಲೆಂಡ್, ಜರ್ಮನಿ, ಗ್ರೀಸ್ ಮತ್ತು ಆಸ್ಟ್ರಿಯಾ ಆಗಿವೆ. ಇನ್ನು ಪ್ರಮುಖ ತಾಣಗಳನ್ನು ನೋಡುವುದಾದರೆ ಪ್ಯಾರಿಸ್ ಅತ್ಯಂತ ರೋಮ್ಯಾಂಟಿಕ್ ತಾಣವಾಗಿದೆ,ಲಂಡನ್ನ ಬಂಕಿಂಗ್ ಹ್ಯಾಮ್ ಅರಮನೆ ಮತ್ತು ಲಂಡನ್ ಬ್ರಿಜ್, ಮಾಲ್ಡೀವ್ಸ್ ನ ದ್ವೀಪಗಳು, ಐಸ್ಲ್ಯಾಂಡ್ ನ ಬೆಂಕಿ ಮತ್ತು ಮಂಜುಗಡ್ಡೆಯ ದೀಪ, ರೋಮ್ ನ ಕೊಲೋಸಿಯಂ, ಕಿನ್ಯಾದ ಮಸಾಯಿ ಮಾರ ಸಫಾರಿ ತಾಣ, ಗ್ರೀಸ್ ನ ದ್ವೀಪಗಳು, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಮತ್ತು ನ್ಯೂ ಯಾರ್ಕ್ ಶಾಪಿಂಗ್ ನ ಸ್ವರ್ಗವಾಗಿದೆ.

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ ಇದು ಜಿಡಿಪಿಗೆ 6.23% ಹಾಗೂ ಉದ್ಯೋಗಕ್ಕೆ 8.78% ಕೊಡುಗೆ ನೀಡುತ್ತದೆ, ವಾರ್ಷಿಕ 5 ದಶಲಕ್ಷಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಾರೆ. ಪ್ರತಿ ವರ್ಷ ಮೂರು ದಶಲಕ್ಷಕಿಂತಲೂ ಹೆಚ್ಚು ಪ್ರವಾಸಿಗರು ತಾಜ್ ಮಹಲ್ಗೆ ಭೇಟಿ ನೀಡುತ್ತಾರೆ.ಪ್ರಪಂಚದಾದ್ಯಂತ ಜನರು "ಇನ್ಕ್ರೆಡಿಬಲ್ ಇಂಡಿಯಾ". ಕೆ ಬಂದು ತಿಂಗಳುಗಳ ಕಾಲ ಅದರ ರಮಣೀಯ ಸೌಂದರ್ಯವನ್ನು ಅನ್ವೇಷಿಸುತ್ತಾರೆ. ಇನ್ನು ಅನೇಕ ಐತಿಹಾಸಿಕ ಸ್ಥಳಗಳು, ಅಭಯಾರಣ್ಯಗಳು ವಿದೇಶಿಗರನ್ನು ಕೈಮಾಡಿ ಕರೆಯುತ್ತವೆ.

ಕರ್ನಾಟಕ ಭಾರತದಲ್ಲಿ ನಾಲ್ಕನೆಯ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿದೆ. ಭಾರತದಲ್ಲಿರುವ ರಕ್ಷಣಾ ಸ್ಮಾರಕಗಳ ಪೈಕಿ 507 ಸ್ಮಾರಕಗಳನ್ನು ಹೊಂದಿದ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 21 ವನ್ಯಜೀವಿ ಅಭಯಾರಣ್ಯಗಳು ಮತ್ತು 5 ರಾಷ್ಟ್ರೀಯ ಉದ್ಯಾನವನಗಳಿವೆ.

ಕರ್ನಾಟಕದಲ್ಲಿ ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ತುಂಬಾನೇ ಬಲ ಬಂದಿದೆ. ಹೆಣ್ಣು ಮಕ್ಕಳು ಕಳೆದ 7-8 ತಿಂಗಳುಗಳಲ್ಲಿ ಅನೇಕ ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ತೀರಾ ಹೊರಗಿನ ಪ್ರಪಂಚವೇ ನೋಡಿರದ ಹಳ್ಳಿಯ ಹೆಂಗಳೆಯರು ಪ್ರವಾಸೋದ್ಯಮಕ್ಕೆ ಕಾಲಿಟ್ಟು ಹೊಸತನವನ್ನು ಕಂಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಅಭಿನಂದನೆ ಹೇಳದೆ ಇರಲಾಗದು.

ನೃಪತುಂಗನ ನಾಡು, ನಾಡಿಗೆ ಕವಿರಾಜಮಾರ್ಗವನ್ನು ಕೊಟ್ಟ ನೆಲ, ಕಲ್ಯಾಣದ ಹೆಬ್ಬಾಗಿಲು, ತೊಗರಿಯ ಕಣಜ ಎಂದೇ ಪ್ರಖ್ಯಾತವಾಗಿರುವ ಕಲಬುರ್ಗಿ ಕೂಡ ಪ್ರವಾಸೋದ್ಯಮಕ್ಕೆ ತುಂಬಾನೇ ಹೆಸರುವಾಸಿಯಾಗಿದೆ. ಕಲಬುರ್ಗಿ ಕೋಟೆಯೊಳಗೆ ಜುಮ್ಮಾ ಮಸೀದಿ ಇದ್ದು ಇದು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿದೆ,ದಕ್ಷಿಣ ಏಷ್ಯಾದಲ್ಲಿ ಇದು ಅತ್ಯಂತ ವಿಶೇಷವಾದ ಮಸೀದಿಯಾಗಿದೆ ಸನ್ನತಿಯಲ್ಲಿ ಸ್ಮಾರಕಗಳು ಮತ್ತು ಅಶೋಕನ ಶಾಸನಗಳಿವೆ.

ಇನ್ನು ನ್ಯಾಯಶಾಸ್ತ್ರದ ಪಿತಾಮಹ ವಿಜ್ಞಾನೇಶ್ವರರ ಸಂಶೋಧನಾ ಕೇಂದ್ರ ಮರ್ತುರಿನಲ್ಲಿದೆ. ಚಿಂಚೋಳಿಯ ಚಂದ್ರಂಪಳ್ಳಿ ಜಲಾಶಯ, ಕಾಗಿಣಾ ನದಿ ತಟದ ಮೇಲಿರುವ ರಾಷ್ಟ್ರಕೂಟರು ಆಳಿದ ಮಳಖೇಡದ ಮೂರು ಸುತ್ತಿನ ಕೋಟೆಯು ನೋಡಲು ಸುಂದರವಾಗಿದೆ ಆದರೆ ಈಗ ಅದು ಅಳಿವಿನಂಚಿನಲ್ಲಿದೆ.

 ಅದು ಎಷ್ಟೇ ಉರಿಬಿಸಿಲಿದ್ದರೂ ಇಲ್ಲಿನ ಜನ ಚಹಾ ಸವಿದು ಅತ್ಯಂತ ನೆಮ್ಮದಿಯ ಮತ್ತು ಆನಂದದ ಬದುಕನ್ನು ಸಾಗಿಸುತ್ತಿದ್ದಾರೆ.

ನೀವು ಕೂಡಾ ನೆಮ್ಮದಿಯ ನಾಳೆಗಾಗಿ ಇಂದೇ ಪ್ರವಾಸ ಹೊರಡಿ.

"ಪ್ರಯಾಣ ಇದು ನಿಮ್ಮನ್ನು ಮೂಕರನ್ನಾಗಿಸುತ್ತದೆ, ನಂತರ ನಿಮ್ಮನ್ನು ಕತೆಗಾರರನ್ನಾಗಿ ಮಾಡುತ್ತದೆ"-ಇಬ್ನ ಬಟುಟಾ

ಪರಮಾನಂದ ಸರಸಂಬಿ

 ಶಿಕ್ಷಕರು ಅಫಜಲಪುರ 7022783643