ಮಹಾಶಿವರಾತ್ರಿ: ತ್ಯಾಗ-ಕರುಣೆಯ ಸಂಕೇತ ಶಿವ – ಶಿವಾನಂದ ಹೂಗಾರ

ಮಹಾಶಿವರಾತ್ರಿ: ತ್ಯಾಗ-ಕರುಣೆಯ ಸಂಕೇತ ಶಿವ – ಶಿವಾನಂದ ಹೂಗಾರ

ಮಹಾಶಿವರಾತ್ರಿ: ತ್ಯಾಗ-ಕರುಣೆಯ ಸಂಕೇತ ಶಿವ – ಶಿವಾನಂದ ಹೂಗಾರ

ಸೇಡಂ ರಸ್ತೆ, ವಿದ್ಯಾನಗರ ಕಾಲೋನಿ, ಫೆ.15, 2026:ಮಹಾಶಿವರಾತ್ರಿ ಪ್ರಯುಕ್ತ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪೋತ್ಸವ, ಸಂಗೀತೋತ್ಸವ ಹಾಗೂ ದೇಹಾಂಗದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿಯ ಅಧ್ಯಕ್ಷ ಶಿವಾನಂದ ಹೂಗಾರ ಅವರು, “ಶಿವಂ ಭೋತ್ವಾ, ಶಿವಂ ಯಜೇತ್ ಅಂದರೆ ಶಿವನಾಗಿಯೇ ಶಿವನನ್ನು ಪೂಜಿಸಬೇಕು. ಶಿವನೆಂದರೆ ತ್ಯಾಗ ಮತ್ತು ಕರುಣೆಯ ಸಂಕೇತ. ಸಮುದ್ರ ಮಂಥನದ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ವಿಷವನ್ನು ಕುಡಿದು ನೀಲಕಂಠನಾದ ಶಿವನು ಮಾನವಕುಲಕ್ಕೆ ಆದರ್ಶ” ಎಂದು ಅಭಿಪ್ರಾಯಪಟ್ಟರು.

ದೇಹಾಂಗದಾನದ ಮಹತ್ವವನ್ನು ವಿವರಿಸಿದ ಅವರು, “ಶಿವನು ಮುಕ್ಕಣ್ಣ; ನಾವು ಕಣ್ಣು ದಾನ ಮಾಡಿದರೆ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಬಹುದು. ಸಾವಿನ ನಂತರ ದೇಹವನ್ನು ಮಣ್ಣುಪಾಲು ಮಾಡುವ ಬದಲು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ದಾನ ಮಾಡಿದರೆ ಅದು ಜ್ಞಾನದಾನದ ಪುಣ್ಯ” ಎಂದು ಕರೆ ನೀಡಿದರು.

ಇಂದಿನ ಡಬಲ್ ಮಿನಿಂಗ್‌ ಗೀತೆಗಳ ನಡುವೆ ತತ್ವಪದ, ನೀತಿಪದಗಳ ಪ್ರಚಾರ ಅಗತ್ಯವೆಂದು ತಿಳಿಸಿದ ಅವರು, ಶಿವರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಅಮೃತಪ್ಪ ಅಣ್ಣೂರ ಮತ್ತು ಎಂ.ಎನ್. ಸುಗಂಧಿ ತತ್ವಪದ, ಜನಪದ ಗೀತೆಗಳ ಮೂಲಕ ಭಕ್ತರನ್ನು ರಂಜಿಸಿದರು. ರಾಜ್ವಿಕಾ ಶಾಲೆಯ ಮಕ್ಕಳು ‘ಗುರು-ಶಿಷ್ಯ’ ಸಂಬಂಧದ ಆಧಾರದ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು.

ಅಣ್ಣಾರಾವ ಶೆಳ್ಳಗಿ ಮತ್ತಿಮೂಡ, ಆನಂದ ನಂದಿಕೋಲಮಠ, ಕಲ್ಯಾಣಿ ಶೀಲವಂತ, ಮೌನೇಶ ಪಂಚಾಳ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾನಗರದ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಹಾಗೂ ಪ್ರಗತಿ ಕಾಲೋನಿಯ ಅಕ್ಕನಾಗಮ್ಮ ಮಹಿಳಾ ಸಂಘದ ವತಿಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಭಜನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಸಂಜಯ ಸಿಂಗ್, ಶಿಲ್ಪಾ ಕೋಟೆ, ಯಂಕಮ್ಮ ಗುತ್ತೇದಾರ, ಉಮೇಶ ಶೆಟ್ಟಿ, ವಿಶ್ವನಾಥ ರಟಕಲ್ ಹಾಗೂ ಶಿವರಾಜ ಅಂಡಗಿ ಉಪಸ್ಥಿತರಿದ್ದರು.

ಸಂಜೆ 4.30ರಿಂದ 10.30ರವರೆಗೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾದರು.