ಕನಕದಾಸರ ಸಾಮಾಜಿಕ ಚಿಂತನೆಗಳು ಸಾರ್ವಕಾಲಿಕ ಶ್ರೇಷ್ಠ - ಮರಲಿಂಗ ಜಿ.
ಕನಕದಾಸರ ಸಾಮಾಜಿಕ ಚಿಂತನೆಗಳು ಸಾರ್ವಕಾಲಿಕ ಶ್ರೇಷ್ಠ - ಮರಲಿಂಗ ಜಿ.
ಚಿತ್ತಾಪುರ: 16ನೇ ಶತಮಾನದಲ್ಲಿ ಕೀರ್ತಿನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿ,ಜಾತಿ ಪದ್ಧತಿ, ಮೌಡ್ಯ ಮತ್ತು ಅಸಮಾನತೆಯನ್ನು ವಿರೋಧಿಸಿ ಸಮಾಜದಲ್ಲಿ ಸರ್ವರಿಗೂ ಸಮಾನತೆಯ ಸಂದೇಶವನ್ನು ಸಾರಿದ ಕನ್ನಡದ ಸಂತ ಕವಿ ಕನಕದಾಸರ ಸಾಮಾಜಿಕ ಚಿಂತನೆಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಸಾಹಿತಿ ಹಾಗೂ ಕನ್ನಡ ಉಪನ್ಯಾಸಕ ಮರಲಿಂಗ ಜಿ. ಹೇಳಿದರು.
ನಗರದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಶ್ರಮಜೀವಿಗಳ ಬದುಕಿಗೆ ಮತ್ತು ದೀನ ದಲಿತರ ಸಂಸ್ಕೃತಿಗೆ ಮನ್ನಣೆ ನೀಡುವುದರ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದ ಶ್ರೇಷ್ಠ ಸಂತ ಕನಕದಾಸರು ಎಂದು ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ದೇವಿಂದ್ರಪ್ಪ ಇಮ್ಮಡಾಪುರ ಮಾತನಾಡಿ,ಜಾತಿಯಿಂದ ಯಾರು ದೊಡ್ಡವರಲ್ಲ ನೀತಿಯಿಂದ ದೊಡ್ಡವರು ಎಂದು ತಿಳಿದು ಅವರ ವೈಚಾರಿಕತೆ ಚಿಂತನೆಗಳು ಯುವಕರು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ಹಾಚೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿದು ಕನಕದಾಸರ ಮೌಲ್ಯಯುತ ಕೃತಿಗಳನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಯುವ ಸಾಹಿತಿ ಶಿಕ್ಷಕ ರಂಗನಾಥ್ ದೊರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳಾಡಿದರು, ಕಾರ್ಯಕ್ರಮದ ಪ್ರಾರಂಭದಲ್ಲಿ ಕು.ಚೈತ್ರ ಮತ್ತು ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕಿ ಸರಸ್ವತಿ ಸರ್ವರನ್ನು ಸ್ವಾಗತಿಸಿದರು, ಮಲ್ಲಿಕಾರ್ಜುನ್ ಮದನಕರ್ ನಿರೂಪಿಸಿ ವಂದಿಸಿದರು.
