ವಿದ್ಯಾನಗರದಲ್ಲಿ ಮಾಜಿ ಸೈನಿಕರಿಗೆ ಗೌರವ: ಕಾರ್ಗಿಲ್ ವಿಜಯೋತ್ಸವ ಆಚರಣೆ
ವಿದ್ಯಾನಗರದಲ್ಲಿ ಮಾಜಿ ಸೈನಿಕರಿಗೆ ಗೌರವ: ಕಾರ್ಗಿಲ್ ವಿಜಯೋತ್ಸವ ಆಚರಣೆ
ಕಲಬುರಗಿ, ಜು. 26: ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್ಫೇರ್ ಸೊಸೈಟಿ ವತಿಯಿಂದ 27ನೇ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೂವರು ಮಾಜಿ ಸೈನಿಕರನ್ನು ರಾಷ್ಟ್ರಧ್ವಜ ನೀಡಿ ಗೌರವಿಸಿ, ಅವರ ದೇಶಸೇವೆ ಮತ್ತು ತ್ಯಾಗವನ್ನು ಸ್ಮರಿಸಲಾಯಿತು.
ಮಾಜಿ ಸೈನಿಕ ರೇವಣಸಿದ್ದಪ್ಪ ಜೀವಣಗಿ ಮಾತನಾಡಿ, ಕಾರ್ಗಿಲ್ ಯುದ್ಧವು ಭಾರತದ ಸೈನಿಕರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ ಎಂದು ಹೇಳಿದರು. ಪಾಕಿಸ್ತಾನದ ನುಸುಳುಕೋರರನ್ನು 18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ, ತೀವ್ರ ಚಳಿ, ಕಡಿಮೆ ಆಮ್ಲಜನಕ ಹಾಗೂ ಪ್ರತಿಕೂಲ ವಾತಾವರಣದಲ್ಲಿಯೂ ಹಿಮ್ಮೆಟ್ಟಿಸಿ ವಿಜಯ ಸಾಧಿಸಿದ ಭಾರತೀಯ ಯೋಧರ ಸಾಹಸ ವಿಶ್ವಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು. ತಮ್ಮ ಸೈನಿಕ ಸೇವೆಯ ಅನುಭವಗಳನ್ನೂ ಹಂಚಿಕೊಂಡರು.
ಮಾಜಿ ಸೈನಿಕ ಶಾಂತಯ್ಯ ಸಂದಿಮಠ ಮಾತನಾಡಿ, ಜುಲೈ 26 ಕೇವಲ ಒಂದು ದಿನಾಂಕವಲ್ಲ; ಅದು ಕಾರ್ಗಿಲ್ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯದ ಸಂಕೇತವಾಗಿದೆ. ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಸೈನಿಕರು ಸಲ್ಲಿಸಿದ ಅಮೋಘ ಸೇವೆ ಸದಾ ಸ್ಮರಣೀಯವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿನಾಥ ದೇಶಮುಖ ವಹಿಸಿದ್ದರು. ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ಸೇರಿದಂತೆ ಮಾಜಿ ಸೈನಿಕರು ಹಾಗೂ ವಿದ್ಯಾನಗರ ವೆಲ್ಫೇರ್ ಸೊಸೈಟಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶರಕ್ಷಣೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರ ತ್ಯಾಗ, ಬಲಿದಾನ ಮತ್ತು ದೇಶಭಕ್ತಿಯನ್ನು ಸ್ಮರಿಸಲಾಯಿತು.
