ಬಿಳವಾರ ಗ್ರಾಮ ದೇವತೆ ದೇವಸ್ಥಾನದಲ್ಲಿ ₹4.60 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳ್ಳತನ
ಬಿಳವಾರ ಗ್ರಾಮ ದೇವತೆ ದೇವಸ್ಥಾನದಲ್ಲಿ ₹4.60 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳ್ಳತನ
ಯಡ್ರಾಮಿ, ಜು. 24: ತಾಲೂಕಿನ ಬಿಳವಾರ ಗ್ರಾಮದ ಗ್ರಾಮ ದೇವತೆ (ದೇವತಿ ಗುಡಿ) ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಸುಮಾರು ₹4.60 ಲಕ್ಷ ಮೌಲ್ಯದ 46 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕರಾದ ಸಂತೋಷ ಚಿದಾನಂದ ಪಂಚಾಳ ಅವರು ನೀಡಿದ ದೂರಿನ ಪ್ರಕಾರ, ಜುಲೈ 23ರಂದು ರಾತ್ರಿ ಸುಮಾರು 10 ಗಂಟೆಗೆ ದೇವಸ್ಥಾನದ ಒಳಗಿನ ಎರಡು ಗೇಟ್‌ಗಳಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆದರೆ ಹೊರಗಿನ ಗೇಟ್‌ಗೆ ಬೀಗ ಹಾಕಿರಲಿಲ್ಲ. ಜುಲೈ 24ರಂದು ಬೆಳಿಗ್ಗೆ ಸುಮಾರು 4.45ಕ್ಕೆ ಪೂಜೆಗೆ ದೇವಸ್ಥಾನಕ್ಕೆ ಬಂದಾಗ ಮುಖ್ಯದ್ವಾರ ಹಾಗೂ ಗರ್ಭಗುಡಿಯ ಬಾಗಿಲು ತೆರೆದಿರುವುದು ಕಂಡುಬಂದಿದೆ. ಪರಿಶೀಲನೆ ನಡೆಸಿದಾಗ ಗರ್ಭಗುಡಿಯ ಗೇಟ್‌ಗೆ ಹಾಕಿದ್ದ ಬೀಗ ಮುರಿದಿದ್ದು, ದೇವಿಯ ಮೈಮೇಲಿದ್ದ ಬಂಗಾರದ ಆಭರಣಗಳು ಕಾಣೆಯಾಗಿರುವುದು ಗೊತ್ತಾಗಿದೆ.
ಕಳ್ಳರು ದೇವಿಯ ಕೊರಳಲ್ಲಿದ್ದ ಎರಡು ತಾಳಿಗಳು, ತಾಳಿ ಸರದ ಗುಂಡ, ಸರ, ಜೀರಾಮಣಿ, ಬೋರಮಾಳ ಹಾಗೂ ಮೂಗಿನ ಮೂಗುತಿ ಸೇರಿದಂತೆ ಒಟ್ಟು 46 ಗ್ರಾಂ ತೂಕದ ಸುಮಾರು ₹4.60 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ತಿಳಿದ ಕೂಡಲೇ ಗ್ರಾಮದ ಹಿರಿಯರು ಹಾಗೂ ಸ್ಥಳೀಯರು ದೇವಸ್ಥಾನಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಅರ್ಚಕ ಸಂತೋಷ ಪಂಚಾಳ ಅವರು ಯಡ್ರಾಮಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ, ಕಳುವಾದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಯಡ್ರಾಮಿ ಪೊಲೀಸರು ಕ್ರೃಮ್ ನಂಬರ್ 112,ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
