"ನಡೆದು ನೋಡು ಕರ್ನಾಟಕ"ಎರಡು ದಿನಗಳ ವಿನೂತನ ಕಾರ್ಯಕ್ರಮ ಸಮಾಜಮುಖಿ ನಡಿಗೆಯಲ್ಲಿ ಚಿತ್ರಕಲಾ ಪ್ರದರ್ಶನ

"ನಡೆದು ನೋಡು ಕರ್ನಾಟಕ"ಎರಡು ದಿನಗಳ ವಿನೂತನ ಕಾರ್ಯಕ್ರಮ  ಸಮಾಜಮುಖಿ ನಡಿಗೆಯಲ್ಲಿ ಚಿತ್ರಕಲಾ ಪ್ರದರ್ಶನ

"ನಡೆದು ನೋಡು ಕರ್ನಾಟಕ"ಎರಡು ದಿನಗಳ ವಿನೂತನ ಕಾರ್ಯಕ್ರಮ

ಸಮಾಜಮುಖಿ ನಡಿಗೆಯಲ್ಲಿ ಚಿತ್ರಕಲಾ ಪ್ರದರ್ಶನ

ಕಲಬುರಗಿ : ಕರ್ನಾಟಕವನ್ನು ಪ್ರವಾಸಿಯಾಗಿ ನೋಡುವ ವಿಶಿಷ್ಟ ದೃಷ್ಟಿಕೋನವನ್ನು ಜಾಗೃತಿಗೊಳಿಸಲು "ಸಮಾಜಮುಖಿ ನಡಿಗೆ"ಯ ನಡೆದು ನೋಡು ಕರ್ನಾಟಕ ಎಂಬ ವಿಶೇಷ ಯೋಜನೆಯಡಿಯಲ್ಲಿ ಕಲಬುರಗಿಯ ಖ್ಯಾತ ಚಿತ್ರ ಕಲಾವಿದರಾದ ನಾರಾಯಣ ಜೋಶಿಯವರ ಕಲಾ ಕೃತಿಗಳ ವೀಕ್ಷಣೆ ಗಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು

      ಕಲಬುರಗಿಯ ನಾಗನಹಳ್ಳಿ ಸರ್ಕಲ್ ಬಳಿಯ ಹೋಟೆಲ್ ಬೃಂದಾವನ ಗ್ರ್ಯಾಂಡ್ ಸಭಾಂಗಣದಲ್ಲಿ ಜುಲೈ 25 ರಂದು ಚಿತ್ರ ಕಲಾವಿದ ನಾರಾಯಣ ಜೋಶಿಯವರ ಕಲಾ ಕೃತಿಗಳ ವೀಕ್ಷಣೆ, ಪ್ರದರ್ಶನ , ಮಾಹಿತಿ ಹಂಚಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಕಲಬರಗಿ ಜಿಲ್ಲೆಯ ಪ್ರವಾಸಿ ತಾಣಗಳು ಬಹುಮನಿ ಕೋಟೆ, ಶರಣಬಸವೇಶ್ವರ ದೇಗುಲ, ಖಾಜಾ ಬಂದೇ ನವಾಜ್ ದರ್ಗಾ, ಹಫ್ತ್ ಗುಂಬಜ್ , ಮ್ಯೂಸಿಯಂ, ಬೌದ್ಧ ಸ್ಮಾರಕ ಮುಂತಾದ ಕಲಾಕೃತಿಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಮಾಜಮುಖಿ ನಡಿಗೆಯ ಸದಸ್ಯರಿಗೆ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿ (ಗೈಡ್) ಬಸವರಾಜ್ ಎಂ ರಾವೂರ್ ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವದ ವಿಷಯಗಳನ್ನು ವಿಶ್ಲೇಷಿಸಿ ಮಾರ್ಗದರ್ಶನ ನೀಡಿ "ನಡೆದು ನೋಡು ಕರ್ನಾಟಕ" ಮಾಹಿತಿಯನ್ನು ಹಂಚಿಕೊಂಡರು. ಸಮಾಜಮುಖಿ ನಡಿಗೆಯಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 35ಕ್ಕೂ ಹೆಚ್ಚು ಸಂಶೋಧಕರು, ಚಿಂತಕರು, ಪ್ರವಾಸಿ ಆಸಕ್ತರು ಆಗಮಿಸಿದ್ದರು. ನಗರದ ಸುತ್ತಮುತ್ತಲ ಪ್ರವಾಸಿ, ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳ ಭೇಟಿಯ ನಂತರ ಬೌದ್ಧ ಸ್ಮಾರಕ ಸನ್ನತಿ, ಕನಗಾನಹಳ್ಳಿ, ಚಂದ್ರಲಾಂಬ ದೇಗುಲ ಹಾಗೂ ಕಾಳಗಿಯ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ "ನಡೆದು ನೋಡು ಕರ್ನಾಟಕ " ವಿಶೇಷ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

     ಚಿತ್ರಕಲಾ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಸಂಶೋಧಕರು ಹಾಗೂ ಸಾಹಿತಿಗಳಾದ ಗಂಗಾವತಿಯ ಡಾ. ದೇವೇಂದ್ರಪ್ಪ ಜಾಜಿ, ಚಿತ್ರ ಕಲಾವಿದರಾದ ನಾರಾಯಣ ಜೋಶಿ, ರಮೇಶ್ ಗಬ್ಬೂರು ಕವಿಗಳು,ಪ್ರಸಿದ್ದ ವೈದ್ಯರಾದ ಡಾ.ಪುಷ್ಪಲತಾ ಬಳ್ಳಾರಿ,

ಶುಭಾ ಅರಸ್ ,ಬೆಂಗಳೂರು, ಗಿರಿಜಾ ಚಂದ್ರಶೇಖರ ಬೆಳಗೆರೆ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

*ಸಾಂಸ್ಕೃತಿಕ ವಿನಿಮಯದ ಸಮಾಜ ನಡಿಗೆ*

ಸಮಾಜಮುಖಿ ನಡಿಗೆಯ ಭಾಗವಾಗಿ ಕಲಬುರಗಿಗೆ ರಾಜ್ಯದ ವಿವಿಧ ಜಿಲ್ಲೆಗಳ ಸದಸ್ಯರು ಆಗಮಿಸಿ ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳ ಭೇಟಿಯಿಂದ ಸಾಂಸ್ಕೃತಿಕ ವಿನಿಮಯಕ್ಕೆ ಉತ್ತೇಜನವಾಗುತ್ತದೆ ಮಾತ್ರವಲ್ಲ " ನಡೆದು ನೋಡು ಕರ್ನಾಟಕ " ಎಂಬ ವಿನೂತನ ಕಾರ್ಯಕ್ರಮವು ಪ್ರವಾಸೋದ್ಯಮಕ್ಕೆ ಹೊಸ ದಿಶೆ ತೋರಿಸಬಲ್ಲ ವಿನೂತನ ಪ್ರಯೋಗ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು. 

    ಈ ಭೇಟಿಯಿಂದ ಐತಿಹಾಸಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳ ಮೇಲೆ ಹೊಸ ಬೆಳಕು ಚೆಲ್ಲಲು ಪ್ರೇರಣೆ ಸಿಗುತ್ತದೆ ಹಾಗೂ ಚಿಂತಕರ ಸಮಾಗಮ ಏರ್ಪಡುತ್ತದೆ ಎಂದು ಹೇಳಿದರು. "ನಡೆದು ನೋಡು ಕರ್ನಾಟಕ" ಕಲಬುರಗಿ ಕಾರ್ಯಕ್ರಮದ ಸಂಚಾಲಕರಾದ ಸಂಶೋಧಕರು, ಹಾಗೂ ಸಾಹಿತಿಗಳಾದ ಡಾ ದೇವೇಂದ್ರಪ್ಪ ಜಾಜಿ ಸರ್ವರನ್ನು ಸ್ವಾಗತಿಸಿ ಎರಡು ದಿನಗಳಲ್ಲಿ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತಲ್ಲದೆ ಈ ಭಾಗದ ಅತ್ಯಂತ ವಿಶಿಷ್ಟ ಪ್ರಕಾರವಾದ ಸೂಫಿ ಸಂಪ್ರದಾಯದ ಖವ್ವಾಲಿ ಕಾರ್ಯಕ್ರಮವು ಸಮಾಜಮುಖಿ ನಡಿಗೆಯ ಸದಸ್ಯರಿಗೆ ಸಂತೋಷವನ್ನುಂಟು ಮಾಡಿದೆ. ಸೂಫಿ ಕವಿ ಬೋಡೇ ರಿಯಾಜ್ ಅಹಮದ್ ಅವರ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.