ಅಲೈಡ್ ಹಾಗೂ ಹೆಲ್ತ್‌ಕೇರ್ ಶಿಕ್ಷಣಕ್ಕೆ ಕನಿಷ್ಠ ಮಾನದಂಡ ಜಾರಿ: ದೇಶದಲ್ಲೇ ಮೊದಲ ರಾಜ್ಯವಾಗಿ ಕರ್ನಾಟಕ ಹೊಸ ಇತಿಹಾಸ
ಅಲೈಡ್ ಹಾಗೂ ಹೆಲ್ತ್‌ಕೇರ್ ಶಿಕ್ಷಣಕ್ಕೆ ಕನಿಷ್ಠ ಮಾನದಂಡ ಜಾರಿ: ದೇಶದಲ್ಲೇ ಮೊದಲ ರಾಜ್ಯವಾಗಿ ಕರ್ನಾಟಕ ಹೊಸ ಇತಿಹಾಸ
ಕಲಬುರಗಿ: ಅಲೈಡ್ ಹಾಗೂ ಹೆಲ್ತ್‌ಕೇರ್ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಶನ್ಸ್ ಆಯೋಗ (NCAHP) ಕೈಪಿಡಿಗಳ ಆಧಾರದ ಮೇಲೆ ಅಲೈಡ್ ಮತ್ತು ಹೆಲ್ತ್‌ಕೇರ್ ಹಾಗೂ ಫಿಸಿಯೋಥೆರಪಿ ಶಿಕ್ಷಣಕ್ಕಾಗಿ ಕನಿಷ್ಠ ಮಾನದಂಡಗಳ ಅವಶ್ಯಕತೆಗಳ (Minimum Standards Requirements - MSR) ಚೌಕಟ್ಟನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ಕರ್ನಾಟಕ ರಾಜ್ಯ ಅಲೈಡ್ & ಹೆಲ್ತ್‌ಕೇರ್ ಕೌನ್ಸಿಲ್ (KSAHC) ಸಿದ್ಧಪಡಿಸಿದ MSR ಕೈಪಿಡಿಯನ್ನು ಬಿಡುಗಡೆ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಐಎಎಸ್ ಹಾಗೂ KSAHC ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಅಲಿ ಉಪಸ್ಥಿತರಿದ್ದರು.
2026–27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಲೈಡ್ ಮತ್ತು ಹೆಲ್ತ್‌ಕೇರ್ ಶಿಕ್ಷಣ ಸಂಸ್ಥೆಗಳಲ್ಲಿ ಈ ಮಾನದಂಡಗಳು ಕಡ್ಡಾಯವಾಗಿ ಜಾರಿಯಾಗಲಿವೆ. ಒಟ್ಟು 12 ಪದವಿಪೂರ್ವ (UG) ಮತ್ತು 12 ಸ್ನಾತಕೋತ್ತರ (PG) ಕೋರ್ಸ್‌ಗಳಿಗೆ ಈ ನಿಯಮಗಳು ಅನ್ವಯವಾಗಲಿವೆ.
MSR ಅಡಿಯಲ್ಲಿ ಅಧ್ಯಾಪಕರ ಅರ್ಹತೆ, ಬೋಧಕ ಸಿಬ್ಬಂದಿಯ ಪ್ರಮಾಣ, ಮೂಲಸೌಕರ್ಯ, ಪ್ರಯೋಗಾಲಯಗಳು, ಅಗತ್ಯ ಉಪಕರಣಗಳು, ಕ್ಲಿನಿಕಲ್ ತರಬೇತಿ ಸೌಲಭ್ಯ, ವಿದ್ಯಾರ್ಥಿ ಪ್ರವೇಶ ಮಾನದಂಡ ಹಾಗೂ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಕನಿಷ್ಠ ಅಗತ್ಯಗಳನ್ನು ನಿಗದಿಪಡಿಸಲಾಗಿದೆ. ಇದರಿಂದ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಹಾಗೂ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಮರ್ಥ್ಯಾಧಾರಿತ ಪಠ್ಯಕ್ರಮಕ್ಕೆ ಅನುಗುಣವಾದ ಶಿಕ್ಷಣ ದೊರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್, "MSR ಬಿಡುಗಡೆ ಮೂಲಕ ಕೌಶಲ್ಯಯುತ, ನಿಯಂತ್ರಿತ ಹಾಗೂ ಭವಿಷ್ಯದ ಅಗತ್ಯಗಳಿಗೆ ತಕ್ಕ ಆರೋಗ್ಯ ಕಾರ್ಯಪಡೆಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಬದ್ಧವಾಗಿದೆ. NCAHP ಚೌಕಟ್ಟನ್ನು ರಾಜ್ಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ" ಎಂದು ಹೇಳಿದರು.
KSAHC ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಅಲಿ ಮಾತನಾಡಿ, "MSR ರಾಜ್ಯದ ಎಲ್ಲಾ ಅಲೈಡ್ ಮತ್ತು ಹೆಲ್ತ್‌ಕೇರ್ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಪರಿಶೀಲನೆ ಹಾಗೂ ಮಾನ್ಯತೆಗೆ ಭದ್ರ ಅಡಿಪಾಯವಾಗಲಿದೆ. 2026–27ರಿಂದ ಸುಗಮ ಅನುಷ್ಠಾನಕ್ಕಾಗಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಕೌನ್ಸಿಲ್ ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ" ಎಂದು ತಿಳಿಸಿದರು.
MSR ವ್ಯಾಪ್ತಿಯಲ್ಲಿ ಭೌತಚಿಕಿತ್ಸೆ (BPT/MPT), ಪ್ರಯೋಗಾಲಯ ವಿಜ್ಞಾನ, ಔದ್ಯೋಗಿಕ ಚಿಕಿತ್ಸೆ, ವೈದ್ಯಕೀಯ ರೇಡಿಯಾಲಜಿ ಮತ್ತು ಇಮೇಜಿಂಗ್ ತಂತ್ರಜ್ಞಾನ, ರೇಡಿಯೊಥೆರಪಿ, ಆಪ್ಟೋಮೆಟ್ರಿ, ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನ, ಫಿಸಿಶಿಯನ್ ಅಸೋಸಿಯೇಟ್ಸ್, ರೀನಲ್ ಡಯಾಲಿಸಿಸ್, ತುರ್ತು ವೈದ್ಯಕೀಯ ಸೇವೆ (ಪ್ಯಾರಾಮೆಡಿಕ್) ಸೇರಿದಂತೆ 24 ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು ಒಳಗೊಂಡಿದೆ.
ಈ ಹೊಸ ಮಾನದಂಡಗಳಿಂದ ಅಲೈಡ್ ಮತ್ತು ಹೆಲ್ತ್‌ಕೇರ್ ಶಿಕ್ಷಣದ ಗುಣಮಟ್ಟ ಮತ್ತಷ್ಟು ಬಲಪಡಲಿದ್ದು, ವಿದ್ಯಾರ್ಥಿಗಳ ಕೌಶಲ್ಯ, ರೋಗಿಗಳ ಸುರಕ್ಷತೆ ಹಾಗೂ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.
