ನೇಕಾರ ಸಮುದಾಯವನ್ನು ನಿರ್ಲಕ್ಷಿಸಿದ ರಾಜ್ಯ ಸರಕಾರದ ಬಜೆಟ್ : ಜೆ.ಎಸ್. ವಿನೋದಕುಮಾರ
ನೇಕಾರ ಸಮುದಾಯವನ್ನು ನಿರ್ಲಕ್ಷಿಸಿದ ರಾಜ್ಯ ಸರಕಾರದ ಬಜೆಟ್ : ಜೆ.ಎಸ್. ವಿನೋದಕುಮಾರ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ನೇಕಾರ ಸಮುದಾಯಕ್ಕೆ ತೀವ್ರ ನಿರಾಸೆಯನ್ನುಂಟು ಮಾಡಿದೆ ಎಂದು ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಆರೋಪಿಸಿದ್ದಾರೆ.
ಬಜೆಟ್‌ನಲ್ಲಿ ನೇಕಾರರ ಅಭಿವೃದ್ಧಿಗೆ ಸ್ಪಷ್ಟವಾದ ಯೋಜನೆಗಳಿಲ್ಲದೆ, ಕೇವಲ ಮೂಗಿಗೆ ತುಪ್ಪ ಸವರುವಂತಾಗಿದೆ ಎಂದು ಅವರು ಟೀಕಿಸಿದರು.
ಕೇವಲ ₹75 ಕೋಟಿ ಮೊತ್ತವನ್ನು PM MITRA Scheme ಯೋಜನೆಗೆ ಘೋಷಣೆ ಮಾಡಿರುವುದು ಹೊರತುಪಡಿಸಿ, ನೇಕಾರರ ಕಲ್ಯಾಣಕ್ಕಾಗಿ ಬೇಡಿಕೆಯಿಟ್ಟಿದ್ದ ಸುಮಾರು ₹1,100 ಕೋಟಿ ಅನುದಾನವನ್ನು ಪರಿಗಣಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.50ರಷ್ಟು ಭಾಗ ಹೊಂದಿರುವ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೇವಲ ₹1,500 ಕೋಟಿ ಅನುದಾನ ನೀಡುವುದು ಸಾಲದು. ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇಡೀ ಬಜೆಟ್‌ನಲ್ಲಿ ನೇಕಾರರ ಸಮಸ್ಯೆಗಳು ಹಾಗೂ ಅವರ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪವಿಲ್ಲದೆ, ಆ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಇದು ನೇಕಾರ ಸಮುದಾಯದ ಬಗ್ಗೆ ಸರ್ಕಾರಕ್ಕೆ ಇರುವ ಅಸಡ್ಡೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಇದಲ್ಲದೆ, 11ನೇ ಶತಮಾನದಲ್ಲಿಯೇ ಕನ್ನಡದಲ್ಲಿ ವಚನ ಸಾಹಿತ್ಯ ನೀಡಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಕ್ಷೇತ್ರದಲ್ಲಿ ಸರ್ಕಾರದ ವತಿಯಿಂದ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಮುದನೂರ ಪ್ರಾಧಿಕಾರ ರಚನೆ ಮಾಡುವ ಬೇಡಿಕೆಗೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಹೇಳಿದರು.
ವೃತ್ತಿ ಆರಂಭಿಸಲು ₹5 ಲಕ್ಷದವರೆಗೆ ಸಾಲದ ಸೌಲಭ್ಯ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಇದಕ್ಕೆ ಎಷ್ಟು ಅನುದಾನ ಮೀಸಲಿರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇತರೆ ಅತೀ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಕೆಲವು ನಿಗಮಗಳನ್ನು ಸ್ಥಾಪಿಸುವುದಾಗಿ ಹೇಳಿದ್ದರೂ, ಅವುಗಳಿಗೆ ಅನುದಾನ ಎಷ್ಟು ನೀಡಲಾಗುವುದು ಎಂಬುದನ್ನು ಘೋಷಿಸಿಲ್ಲ ಎಂದು ಅವರು ತಿಳಿಸಿದರು.
ನೇಕಾರ ನಿಗಮ ಸ್ಥಾಪಿಸುವುದಾಗಿ ಹಿಂದೆಯೇ ಹೇಳಿದ್ದರೂ ಅದನ್ನು ಮರೆತು, ಯಾವುದೇ ಅನುದಾನ ಘೋಷಣೆ ಮಾಡದಿರುವುದು ವಿಷಾದನೀಯ. ನೇಕಾರ ಯುವಕರಿಗೆ 2% ಮಿಸಲಾತಿ ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಯುವಜನರಿಗಾಗಿ ಘೋಷಿಸಿದ ಪಂಚಭಾಗ್ಯ ಯೋಜನೆಗಳಲ್ಲಿ ಒಂದಾದ ಯುವನಿಧಿಗೂ ಬಜೆಟ್‌ನಲ್ಲಿ ಸ್ಪಷ್ಟ ಅನುದಾನ ಘೋಷಿಸಿಲ್ಲ ಎಂದು ಅವರು ಹೇಳಿದರು.
ರೈತ ಕಲ್ಯಾಣ ಮತ್ತು ನೀರಾವರಿ ಯೋಜನೆಗಳಿಗೆ ಅಗತ್ಯವಾದಷ್ಟು ಅನುದಾನ ನೀಡದಿರುವುದರಿಂದ ರೈತ ಸಮುದಾಯಕ್ಕೂ ಈ ಬಜೆಟ್ ತೀವ್ರ ನಿರಾಸೆ ಉಂಟುಮಾಡಿದೆ ಎಂದು ಜೆ.ಎಸ್. ವಿನೋದಕುಮಾರ ಹೇಳಿದ್ದಾರೆ.
