ಮಹಾದೇವಪ್ಪ ಕಡೇಚೂರ್ ಕೃತಿ ವಿತರಣಾ ಅಭಿಯಾನಕ್ಕೆ ಚಾಲನೆ ಜ್ಞಾನ ಸಂಸ್ಕಾರ ಪ್ರಸಾರದ ಮಹೋನ್ನತ ಸೇವೆ ಶ್ಲಾಘನೀಯ: ನಿರಗುಡಿ
ಮಹಾದೇವಪ್ಪ ಕಡೇಚೂರ್ ಕೃತಿ ವಿತರಣಾ ಅಭಿಯಾನಕ್ಕೆ ಚಾಲನೆ
ಜ್ಞಾನ ಸಂಸ್ಕಾರ ಪ್ರಸಾರದ ಮಹೋನ್ನತ ಸೇವೆ ಶ್ಲಾಘನೀಯ: ನಿರಗುಡಿ
ಕಲಬುರಗಿ : ಸ್ವಾತಂತ್ರ್ಯ ಹೋರಾಟಗಾರ ಸಾಹಿತಿ ಮಹಾದೇವಪ್ಪ ಕಡೆಚೂರು ಅವರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಕಾರ್ಯವಾಗಿದ್ದು ಹಿರಿಯರ ಚಿಂತನೆ ಹಾಗೂ ಸಂಸ್ಕಾರವನ್ನು ಪ್ರಸಾರ ಮಾಡುವ ಕಾರ್ಯ ಇದಾಗಿದೆ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಹೆಚ್ ನಿರಗುಡಿ ಹೇಳಿದರು.
ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಆರ್ಯ ಈಡಿಗ ಸಮಾಜದ ಶ್ರೀ ಕಾಮರಾಜ್ ನಾಡಾರ್ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಮಹಾದೇವಪ್ಪ ಕಡಚೂರು ಅವರ ಕೃತಿಗಳ ವಿತರಣಾ ಅಭಿಯಾನಕ್ಕೆ ಶುಕ್ರವಾರ ( ಜುಲೈ 24 ರಂದು) ಚಾಲನೆ ನೀಡಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ದುಡಿದ ಕಡೇಚೂರ್ ಅವರು ಉತ್ತಮ ಸಾಹಿತಿಗಳಾಗಿದ್ದು ಅವರ ಕೃತಿಗಳು ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತು ನೀತಿ ತತ್ವಗಳನ್ನು ಬೋಧಿಸುವಂಥವುಗಳು.ಇಂತಹ ಮೌಲಿಕ ಕೃತಿಗಳಿಂದ ಜ್ಞಾನ ಪ್ರಸಾರವಾಗುತ್ತದೆ. ಅವರ ಕೃತಿಗಳು ಮಕ್ಕಳ ಕೈಗೆ ಸೇರಿ ಈ ಅಭಿಯಾನವು ಯಶಸ್ಸಾಗಲಿ ಎಂದು ನಿರಗುಡಿ ಶುಭ ಹಾರೈಸಿದರು.
ಪುಸ್ತಕ ಪ್ರಾಧಿಕಾರವು ಪಿಯು ಮತ್ತು ಡಿಗ್ರಿ ಕಾಲೇಜುಗಳಿಗೆ 25 ಸಾವಿರ ರೂ.ಮೌಲ್ಯದ ಗ್ರಂಥಗಳನ್ನು ಸದ್ಯ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ಮಾಡಲಾಗುವುದು. ಈಗಾಗಲೇ ಈ ಭಾಗದ 30 ಪಿಯು ಮತ್ತು ಡಿಗ್ರಿ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡಲಾಗಿದೆ. ಸರಕಾರ ಮಾಡುವ ಕೆಲಸವನ್ನು ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ಪ್ರಶಂಶಿಸಿದರು.
ಟ್ರಸ್ಟಿನ ಸದಸ್ಯರಾದ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಈ ಅಭಿಯಾನ ಪ್ರತಿ ತಿಂಗಳು ನಡೆಯಲಿದ್ದು ಸರಕಾರಿ ಶಾಲಾ ಗ್ರಂಥಾಲಯಗಳಿಗೆ ಪುಸ್ತಕ ಹಸ್ತಾಂತರಿಸುವ ಯೋಜನೆ ಇಟ್ಟುಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶ್ರೀ ಕಾಮರಾಜ್ ನಾಡಾರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನರಸಯ್ಯ ಗುತ್ತೇದಾರ್ , ಶಾಲಾ ಮುಖ್ಯ ಗುರುಗಳಾದ ರೇಣುಕಾ ಅಶೋಕ್ ಸಂಕಲಾಪುರ, ಕಾಮಧೇನು ಮಹಿಳಾ ಸಂಘದ ಕಾರ್ಯದರ್ಶಿ ಜ್ಯೋತಿ ರಾಜು ಗುತ್ತೇದಾರ್ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ದತ್ತು ಗುತ್ತೇದಾರ್,
ಮಹೇಶ್ ಎಂ ಕಡೇಚೂರ್, ದಿನೇಶ್ ಎಂ ಕಡೆಚೂರ್, ಅಶೋಕ ಸಂಕಲಾಪುರ, ಮಲ್ಲಿಕಾರ್ಜುನ ಕುಕ್ಕುಂದಿ, ಡಾ. ವಿಜಯ್ ಕುಮಾರ ಫರೂತೆ, ರೇವಣಸಿದ್ದಪ್ಪ ದುಕಾನ,ಕಲಾವಿದ ಶಿವ ಕುಮಾರ್ ಮತ್ತಿತರರು ಇದ್ದರು.ಶ್ರೀ ಕಾಮರಾಜ್ ನಾಡಾರ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು , ನಿವೃತ್ತ ಅಧ್ಯಾಪಕರಾದ ರೇವಣಸಿದ್ದಪ್ಪ ಆರ್ಯ ನಿರೂಪಣೆ ಮಾಡಿದರು. ಬಸವರಾಜ ಪಾಟೀಲ್ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಲಾಯಿತು.
ಕತೆಗಳನ್ನು ಕೇವಲ ಓದುವುದರಿಂದ ಮಾತ್ರ ಪ್ರಯೋಜನವಿಲ್ಲ.ಬದಲಾಗಿ ಓದಿದ ಕಥೆಗಳನ್ನು ಅರಗಿಸಿಕೊಂಡು ನೀತಿ ಕಥೆ ಗಳಿಂದ ಕಲಿತ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಹಾದೇವಪ್ಪ ಕಡೇ ಲ್ಚೂರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.
- ಜ್ಯೋತಿ ರಾಜು ಗುತ್ತೇದಾರ್, ಕಾರ್ಯದರ್ಶಿಗಳು, ಕಾಮಧೇನು ಮಹಿಳಾ ಸಂಘ.
ಶಾಲೆಯ ವಿದ್ಯಾರ್ಥಿಗಳಿಗೆ ಅಯ್ಯನ ಕಥೆಗಳು ಕೃತಿಯಲ್ಲಿರುವ ಮುನ್ನೂರು ಕತೆಗಳನ್ನು ಓದಿಸಿ ನೀತಿ ಮೌಲ್ಯಗಳನ್ನು ಮನವರಿಕೆ ಮಾಡಲಾಗುವುದು.
- ರೇಣುಕಾ ಅಶೋಕ ಸಂಕಲಾಪುರ. ಶ್ರೀ ಕಾಮರಾಜ್ ನಾಡಾರ್ ಶಾಲೆ.
