ಮಾದರಿ ಸರಕಾರಿ ಶಾಲೆಗೆ ಜೀವಂತ ದೀಪ – ಡಾ. ವಿಠಲ ವಗ್ಗನ್ ಸರ್ ಅವರ ಶಿಕ್ಷಣ ಸೇವೆ

ಮಾದರಿ ಸರಕಾರಿ ಶಾಲೆಗೆ ಜೀವಂತ ದೀಪ – ಡಾ. ವಿಠಲ ವಗ್ಗನ್ ಸರ್ ಅವರ ಶಿಕ್ಷಣ ಸೇವೆ

ಮಾದರಿ ಸರಕಾರಿ ಶಾಲೆಗೆ ಜೀವಂತ ದೀಪ – ಡಾ. ವಿಠಲ ವಗ್ಗನ್ ಸರ್ ಅವರ ಶಿಕ್ಷಣ ಸೇವೆ

ಸರಕಾರಿ ಶಾಲೆಗಳಲ್ಲಿ ಕಲಿತು, ಇಂದು ಅದೇ ಸರಕಾರಿ ವ್ಯವಸ್ಥೆಯಲ್ಲೇ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಭಾಗ್ಯ ನನಗೆ ದೊರೆತಿದೆ. ಹೆಚ್ಚುವರಿಯಾಗಿ ಸ್ಥಳ ನಿಯುಕ್ತಿಯಾಗಿ ಸ.ಹಿ.ಪ್ರಾ. ಶಾಲೆ ತಾಜ ಸುಲ್ತಾನಪೂರ, ಕಲಬುರಗಿ ಉತ್ತರ ವಲಯದಲ್ಲಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಶಾಲೆಯ ವಿಹಂಗಮ ನೋಟ ನನ್ನನ್ನು ಮೂಕವಿಸ್ಮಿತಳನ್ನಾಗಿಸಿತು. ಹಚ್ಚಹಸಿರಿನಿಂದ ಕಂಗೊಳಿಸುವ ಆವರಣ, ಹೂವು-ಗಿಡಗಳಿಂದ ಅಲಂಕರಿಸಲ್ಪಟ್ಟ ಪರಿಸರ, ಗೋಡೆ ಬರಹಗಳಿಂದ ಜೀವಂತಗೊಂಡ ಕಲಿಕಾ ವಾತಾವರಣ—ಇದು ಸರಕಾರಿ ಶಾಲೆಯೋ, ಖಾಸಗಿ ವಿದ್ಯಾ ಸಂಸ್ಥೆಯೋ ಎಂಬ ಅನುಮಾನ ಮೂಡುವಂತಿತ್ತು. ಕಲಿಕೆಯ ಬೃಂದಾವನದಂತಿರುವ ಈ ವಿದ್ಯಾ ಮಂದಿರ ಕಂಡು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಈ ಸುಂದರ ಚಿಣ್ಣರ ಬೃಂದಾವನ ನಿರ್ಮಾಣಕ್ಕೆ ಕಾರಣೀಭೂತರಾದವರು ಶಾಲೆಯ ಮುಖ್ಯಗುರುಗಳಾದ ಡಾ. ವಿಠಲ ವಗ್ಗನ್ ಸರ್. ಬಿ.ಎ., ಬಿ.ಇಡಿ., ಎಂ.ಎ., ಎಲ್.ಎಲ್.ಬಿ., ಪಿ.ಹೆಚ್.ಡಿ. ಪದವಿಧರರಾದ ಇವರು ನಿಜಕ್ಕೂ ಬಹುಮುಖ ಪ್ರತಿಭೆಯ ಧನಿ. ಶಿಕ್ಷಕರಾಗಿ ಮಾತ್ರವಲ್ಲದೆ ಸಾಹಿತಿ, ಬರಹಗಾರ, ಸಂಶೋಧಕ, ಕಲಾವಿದ, ವಕೀಲ, ವಾಗ್ಮಿ ಹಾಗೂ ಶಿಕ್ಷಕರ ಮಾರ್ಗದರ್ಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕು ತುಂಬಿದ ಇವರ ನಿಸ್ವಾರ್ಥ ಸೇವೆ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದೆ.

             -----:©©© ಶಾಲೆಯ ವಿಶೇಷತೆಗಳು ©©© :-----

ರಂಗು ರಂಗಿನ ರಂಗೋಲಿ ಸಂಪ್ರದಾಯ:ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ವಿದ್ಯಾರ್ಥಿಗಳು ಶಾಲಾ ಆವರಣ ಮತ್ತು ಮುಖ್ಯ ದ್ವಾರದ ಮುಂದೆ ರಂಗೋಲಿ ಹಾಕುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ನಿತ್ಯವೂ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ.

ವಿಶಿಷ್ಟ ಪ್ರಾರ್ಥನಾ ಅವಧಿ:ಧ್ವನಿವರ್ಧಕ, ಡ್ರಮ್ ಸೆಟ್, ಲೇಜಿಮ್ ಮುಂತಾದ ವಾದ್ಯಗಳೊಂದಿಗೆ ಶಿಸ್ತಿನಿಂದ ನಿಂತು ವಿದ್ಯಾರ್ಥಿಗಳು ನಾಡಗೀತೆ, ರಾಷ್ಟ್ರಗೀತೆ ಹಾಗೂ ಸಂವಿಧಾನ ಪೀಠಿಕೆ ಹಾಡುವ ದೃಶ್ಯ ಮನಸ್ಸಿಗೆ ಆನಂದ ನೀಡುತ್ತದೆ.

ಮೌಲ್ಯ ಶಿಕ್ಷಣ ಬೋಧನೆ:ಪ್ರತಿ ದಿನ ಪ್ರಾರ್ಥನೆಯ ನಂತರ ಡಾ. ವಗ್ಗನ್ ಸರ್ ಸಣ್ಣ ಕಥೆಗಳು, ವಚನಗಳ ಮೂಲಕ ಸತ್ಯ, ಪ್ರಾಮಾಣಿಕತೆ, ಗೌರವ, ಜವಾಬ್ದಾರಿ ಮತ್ತು ಸಹಾನುಭೂತಿ ಮುಂತಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಾರೆ.

ಆಧುನಿಕ ತಂತ್ರಜ್ಞಾನ ಬಳಕೆ:ಪ್ರೊಜೆಕ್ಟರ್ ಮೂಲಕ ಪಾಠ ಬೋಧನೆ ನಡೆಸಲು ವೇಳಾಪಟ್ಟಿ ರೂಪಿಸಿದ್ದು, ಪ್ರತಿಯೊಬ್ಬ ಶಿಕ್ಷಕರು ವಾರದಲ್ಲಿ ಕನಿಷ್ಠ ಮೂರು ದಿನ ತಂತ್ರಜ್ಞಾನಾಧಾರಿತ ಬೋಧನೆ ನಡೆಸುವಂತೆ ಮಾರ್ಗದರ್ಶನ ನೀಡಲಾಗಿದೆ.

ಆಟ ಮತ್ತು ಪಾಠ ಸಮನ್ವಯ:ಮುಖ್ಯಗುರುಗಳ ಆಡಳಿತಾತ್ಮಕ ಜವಾಬ್ದಾರಿಗಳ ನಡುವೆಯೂ 3–4 ಅವಧಿಗಳವರೆಗೆ ಪಾಠ ಬೋಧನೆ ಮಾಡುವ ಅವರು, ಕಬ್ಬಡ್ಡಿ ಮತ್ತು ಖೋ-ಖೋ ಆಟಗಳಲ್ಲಿ ಮಕ್ಕಳೊಂದಿಗೆ ಬೆರೆತು ಶಿಸ್ತಿನೊಂದಿಗೆ ಆಟದ ನಿಯಮಗಳನ್ನು ತಿಳಿಸುತ್ತಾರೆ.

ಶನಿವಾರದ ಶಿಕ್ಷಣ ಜಾಗೃತಿ:ಸಾಮೂಹಿಕ ವ್ಯಾಯಾಮದ ನಂತರ ಶಿಕ್ಷಣದ ಮಹತ್ವ ಸಾರುವ ಗೀತೆಗಳನ್ನು ಹಾಡಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುತ್ತಾರೆ.

ತಿಂಗಳಿಗೊಮ್ಮೆ ಸ್ಪರ್ಧೆಗಳು:ಪ್ರಬಂಧ, ರಂಗೋಲಿ, ವಚನ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ.

ಪರಿಹಾರ ಬೋಧನೆ ವ್ಯವಸ್ಥೆ:ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿಗಳ ಮೂಲಕ ಅವರ ಕಲಿಕೆಯನ್ನು ಗಟ್ಟಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಟ್ಸಪ್ ಸಮನ್ವಯ:ಶಿಕ್ಷಕರ ವಾಟ್ಸಪ್ ಗುಂಪು ರಚಿಸಿ ಪ್ರತಿದಿನ ಪಾಠ ಟಿಪ್ಪಣಿಗಳನ್ನು ಪರಿಶೀಲಿಸಿ, ಶಾಲಾ ಅವಧಿ ಬಳಿಕ ಹಿಮ್ಮಾಹಿತಿ ಪಡೆಯುವ ಕ್ರಮ ಜಾರಿಯಲ್ಲಿದೆ.

ಸಂತೋಷ ಹಂಚುವ ಸಂಸ್ಕೃತಿ:ಶಿಕ್ಷಕರ ಮತ್ತು ಅವರ ಮಕ್ಕಳ ಹುಟ್ಟುಹಬ್ಬದಂದು ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಸಂತೋಷವನ್ನು ಹಂಚಿಕೊಳ್ಳುವ ಸಂಪ್ರದಾಯ ರೂಪಿಸಲಾಗಿದೆ.

ಶಿಕ್ಷಕರ ಸಾಮರಸ್ಯ:ಮಧ್ಯಾಹ್ನದ ಊಟವನ್ನು ಎಲ್ಲ ಶಿಕ್ಷಕರು ಪಂಕ್ತಿಯಲ್ಲಿ ಕುಳಿತು ತಮ್ಮ ತಂದ ಆಹಾರವನ್ನು ಹಂಚಿಕೊಂಡು ಸವಿಯುವ ಪರಿಪಾಠವು ಐಕ್ಯತೆಯ ಸಂಕೇತವಾಗಿದೆ.

ಮೂಲಭೂತ ಸೌಕರ್ಯಗಳ ಸಮೃದ್ಧಿ: ವಗ್ಗನ್ ಸರ್ ಅವರ ಪರಿಶ್ರಮದಿಂದ ಶಾಲೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಒದಗಿವೆ. ವಿದ್ಯಾ ಸ್ವರ್ಗವೆನಿಸುವ ಈ ವಾತಾವರಣ ನಿಜಕ್ಕೂ ಮಾದರಿಯಾಗಿದೆ.

ಬೆಳಿಗ್ಗೆ 8:30ರಿಂದ ಸಂಜೆ 6 ಗಂಟೆಗೂ ಮೀರಿದ ಅವಧಿಯವರೆಗೆ ಶಾಲಾ ಕಾರ್ಯಗಳಲ್ಲಿ ತಲ್ಲೀನರಾಗಿರುವ ವಗ್ಗನ್ ಸರ್ ಅವರ ಕಾರ್ಯೋತ್ಸಾಹ ಶ್ಲಾಘನೀಯ. ಶಾಲಾ ಮಕ್ಕಳಷ್ಟೇ ಅಲ್ಲ, ಸುತ್ತಮುತ್ತಲಿನ ಜನರ ಪ್ರೀತಿಗೂ ಪಾತ್ರರಾಗಿರುವ ಅವರು ಪ್ರತಿದಿನ ಮಂಗಗಳಿಗೆ ಆಹಾರ ನೀಡುವ ದಯಾಳು ಹೃದಯದವರು.

ನಿವೃತ್ತಿಗೆ ಇನ್ನೂ ಕೇವಲ ಒಂದು ವರ್ಷ ಬಾಕಿಯಿದ್ದರೂ ಕೂಡ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರ ಉತ್ಸಾಹ ಕಡಿಮೆಯಾಗಿಲ್ಲ. ಇವರ ಸೇವೆ, ಶಿಕ್ಷಣದ ಮೇಲಿನ ಅಪಾರ ಪ್ರೀತಿ ಮತ್ತು ಮಕ್ಕಳ ಮೇಲಿನ ಕಾಳಜಿಯಿಂದ ಅವರು ರಾಜ್ಯದ ಎಲ್ಲಾ ಶಿಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ.

ಇಂತಹ ಮಹನೀಯ ಶಿಕ್ಷಕರಿಗೆ ನನ್ನ ಹಾಗೂ ಶಾಲಾ ಮಕ್ಕಳ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.

ಶ್ರೀಮತಿ ರೇಷ್ಮಾ ಎ.ಆರ್. ಆಜಾದಸಹ ಶಿಕ್ಷಕಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಜ ಸುಲ್ತಾನಪೂರ ,ಕಲಬುರಗಿ ಉತ್ತರ ವಲಯ