ಕನ್ನಡ ಭವನ ನಲ್ಲಿ 13ನೇ ಕಲಬುರಗಿ ಚಿತ್ರಸಂತೆ ಫೆ.22ರಂದು
ಕನ್ನಡ ಭವನ ನಲ್ಲಿ 13ನೇ ಕಲಬುರಗಿ ಚಿತ್ರಸಂತೆ ಫೆ.22ರಂದು
ಕಲಬುರಗಿ, ಫೆ.19: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ವಿಕಾಸ ಅಕಾಡೆಮಿ, ಚೈತನ್ಯಮಯಿ ಟ್ರಸ್ಟ್ ಮತ್ತು ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ 13ನೇ ಕಲಬುರಗಿ ಚಿತ್ರಸಂತೆ ಇದೇ ಫೆಬ್ರವರಿ 22, 2026 ಭಾನುವಾರದಂದು ನಗರದ ಕನ್ನಡ ಭವನದಲ್ಲಿ ಒಂದು ದಿನದ ಕಲಾಮೇಳವಾಗಿ ನಡೆಯಲಿದೆ ಎಂದು ಪಾಟೀಲ ಹೇಳಿದರು.
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾದ ಕಲಬುರಗಿಯಲ್ಲಿ ನಡೆಯುವ ಈ ಚಿತ್ರಸಂತೆಯಲ್ಲಿ ಸುಮಾರು 125ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು, ಹಿರಿಯ ಚಿತ್ರಕಲಾವಿದರು, ಯುವ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳು ಸೇರಿ 1500ಕ್ಕೂ ಹೆಚ್ಚು ವಿವಿಧ ಮಾಧ್ಯಮಗಳ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ನಿಸರ್ಗಚಿತ್ರ, ಅಮೂರ್ತಚಿತ್ರ, ನೈಜಶೈಲಿ, ಗ್ರಾಫಿಕ್ ಕಲಾಕೃತಿಗಳು, ಸಂಪ್ರದಾಯ ಶೈಲಿ, ಕೋಲಾಜ್ ಹಾಗೂ ಶಿಲ್ಪಕಲಾಕೃತಿಗಳು ಸೇರಿದಂತೆ ದೃಶ್ಯಕಲೆಯ ವಿಭಿನ್ನ ಪ್ರಕಾರಗಳು ಒಂದೇ ವೇದಿಕೆಯಲ್ಲಿ ಲಭ್ಯವಾಗಲಿವೆ.
ಕೇವಲ ನೂರು ರೂಪಾಯಿಗಳಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗಿನ ದರದಲ್ಲಿ ಕಲಾಕೃತಿಗಳು ದೊರೆಯಲಿದ್ದು, ಜನಸಾಮಾನ್ಯರು ಸಹ ಕೈಗೆಟುಕುವ ಬೆಲೆಯಲ್ಲಿ ಚಿತ್ರಗಳನ್ನು ಖರೀದಿಸಿ ತಮ್ಮ ಮನೆಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಸಿಗಲಿದೆ. ಸ್ಥಳದಲ್ಲೇ ಭಾವಚಿತ್ರ ರಚಿಸುವ ಕಲಾವಿದರು ಭಾಗವಹಿಸುವುದರಿಂದ ತಮ್ಮದೇ ಭಾವಚಿತ್ರವನ್ನು ರಚಿಸಿಕೊಳ್ಳುವ ಅವಕಾಶವೂ ಕಲಾಸಕ್ತರಿಗೆ ಲಭ್ಯವಾಗಲಿದೆ.
ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ಬಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರು ಚಾಲನೆ ನೀಡಲಿದ್ದಾರೆ. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಸವರಾಜ ಮತ್ತಿಮಡು, ಶರಣಬಸಪ್ಪ ಪಪ್ಪಾ, ಬಸವರಾಜ ಎಲ್ ಜಾನೆ, ಜಗದೀಶ್ವರಿ ಆ ನಾಶಿ, ಆನಂದ ದಂಡೋತಿ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹಾಗೂ ರಾಧೆಶ್ಯಾಮ ಠಾಕೂರ ಭಾಗವಹಿಸಲಿದ್ದಾರೆ. ಚೈತನ್ಯಮಯಿ ಟ್ರಸ್ಟ್‌ನ ನಿರ್ದೇಶಕ ಹಾಗೂ ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿತ್ರಸಂತೆಯ ಅಂಗವಾಗಿ ಸುಮಾರು 500ಕ್ಕೂ ಹೆಚ್ಚು ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಕುಂಭಕಲೆ ಕಾರ್ಯಾಗಾರ ಏರ್ಪಡಿಸಲಾಗಿದೆ. ಪುಷ್ಪಹಸ್ತ ನೃತ್ಯ ಕಲಾ ಕೇಂದ್ರದ ಕಲಾವಿದರಿಂದ ಭರತನಾಟ್ಯ ಪ್ರದರ್ಶನ, ಶ್ರೀ ಸಂಗಯ್ಯ ಹಳ್ಳದಮಠ ಮತ್ತು ತಂಡದವರಿಂದ ರಂಗಗೀತೆ ಹಾಗೂ ತತ್ವಪದಗಳ ಪ್ರಸ್ತುತಿ, ಅಂತರಂಗ ಸಾಂಸ್ಕೃತಿಕ ಕಲಾ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿಲ್ಪಕಲಾವಿದ ದಾನಯ್ಯ ಚೌಕಿಮಠರಿಂದ ಕುಂಭಕಲೆ ಪ್ರಾತ್ಯಕ್ಷತೆ, ಗೋಪಾಲ ಕೆ.ಪಿ.ರಿಂದ ಭಾವಶಿಲ್ಪ ಪ್ರಾತ್ಯಕ್ಷತೆ ಹಾಗೂ ಗಿರೀಶ ಬಿ. ಕುಲಕರ್ಣಿ ಅವರಿಂದ ಸೃಜನಶೀಲ ವರ್ಣಚಿತ್ರ ಪ್ರಾತ್ಯಕ್ಷತೆಗಳು ನಡೆಯಲಿವೆ.
ಹಿಂದಿನ ಚಿತ್ರಸಂತೆಗಳಿಗೆ ಲಭಿಸಿದ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪ್ರೇರಿತವಾಗಿ ಈ ಬಾರಿಯ 13ನೇ ಚಿತ್ರಸಂತೆಯನ್ನು ಇನ್ನಷ್ಟು ವೈಭವದಿಂದ ಆಯೋಜಿಸಲಾಗಿದ್ದು, ಸಾವಿರಾರು ಕಲಾಸಕ್ತರು, ಕಲಾಪೋಷಕರು ಮತ್ತು ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ಹಬ್ಬದ ವಾತಾವರಣಕ್ಕೆ ಕನ್ನಡ ಭವನ ಸಾಕ್ಷಿಯಾಗಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
