ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು - ಡಾ : ಸಿದ್ದರಾಮ ಹೊನಕಲ್.
ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು - ಡಾ : ಸಿದ್ದರಾಮ ಹೊನಕಲ್.
ಶಹಾಪುರ : ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದರ ಜೊತೆಗೆ ಬದುಕಿನಲ್ಲಿ ನೈತಿಕ ಮೌಲ್ಯಗಳು ಅಳವಡಿಸಿಕೊಳ್ಳಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ದರಾಮ ಹೊನಕಲ್ ಸಲಹೆ ನೀಡಿದರು.
ಶಹಾಪುರ ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಆಯೋಜಿಸಿದ ಚಕೋರ ಹಾಗೂ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂಟರ್ನೆಟ್, ಮೊಬೈಲ್ ಗಳಿಂದ ದೂರವಿದ್ದು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು,ಅಲ್ಲದೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಉಳಿವಿಗಾಗಿ ಇಂದಿನ ಯುವ ಪೀಳಿಗೆ ಶ್ರಮಿಸಬೇಕಾಗಿದೆ ಎಂದು ನುಡಿದರು.
ರಾಜ್ಯಶಾಸ್ತ್ರದ ಉಪನ್ಯಾಸಕ ಡಾ: ಬಿ.ಆರ್.ಅಂಚೆಸೂಗೂರು ಮಾತನಾಡಿ ಪ್ರಜಾಪ್ರಭುತ್ವವು ಕೇವಲ ಮತದಾನವಲ್ಲ ಅದು ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಮತ್ತು ಸಾಂವಿಧಾನಿಕ ಮೌಲ್ಯಗಳ ಆಚರಣೆಯಾಗಿದೆ.ಜೊತೆಗೆ ಭಾರತೀಯ ಪ್ರಜೆಗಳಾದ ನಾವು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಸಂವಿಧಾನ ಓದಿ ಅರ್ಥೈಸಿಕೊಳ್ಳಬೇಕು ಎಂದು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಾಯ್.ಎಚ್.ವಜ್ಜಲ್ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಉಪನ್ಯಾಸಕ ಸುರೇಶ್ ಬಾಬು ಅರುಣಿ ಆಂಗ್ಲ ಭಾಷಾ ಉಪನ್ಯಾಸಕಿ ಶೋಭಾ, ಕನ್ನಡ ಜಾಗೃತಿ ಸಮಿತಿ ಸದಸ್ಯ ಬಸವರಾಜ ಶಿಣ್ಣೂರ,ಉಪನ್ಯಾಸಕರಾದ ಹನುಮಂತರಾಯಗೌಡ,ಮೌನೇಶ್ ಜೊತೆಗೆ ಇನ್ನಿತರರು ಉಪಸ್ಥಿತರಿದ್ದರು,ಕುಮಾರಿ ಶ್ರೀದೇವಿ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು.
