ಭಾರತೀಯ ಶಾಸ್ತ್ರೀಯ ನೃತ್ಯದ ವೈಭವ
ಭಾರತೀಯ ಶಾಸ್ತ್ರೀಯ ನೃತ್ಯದ ವೈಭವ: ನಿರಂತರ ನೃತ್ಯ ಸಂಭ್ರಮ
ಭಾರತೀಯ ಶಾಸ್ತ್ರೀಯ ನೃತ್ಯದ ಪರಂಪರೆಯನ್ನು ಸಂರಕ್ಷಿಸಿ, ಅದಕ್ಕೆ ಸಮಕಾಲೀನ ಕಲಾತ್ಮಕ ಸ್ಪಂದನ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಲಾದ ವಾರ್ಷಿಕ ನೃತ್ಯೋತ್ಸವ ‘ನಿರಂತರ ನೃತ್ಯ ಸಂಭ್ರಮ’ಜನವರಿ ೯, ೨೦೨೬ರಂದು ಸಂಜೆ ೬.00 ಗಂಟೆಗೆ ನಗರದ ಸೇವಾಸದನ ಸಭಾಂಗಣದಲ್ಲಿ ನಡೆಯಲಿದೆ.
ಭರತನಾಟ್ಯ ಮತ್ತು ಕಥಕ್ ನೃತ್ಯಶೈಲಿಗಳಲ್ಲಿ ವಿಶೇಷ ಒತ್ತುವರಿಯೊಂದಿಗೆ ತರಬೇತಿ, ಅಭ್ಯಾಸ ಮತ್ತು ಪ್ರಚಾರಕ್ಕೆ ಸಮರ್ಪಿತವಾಗಿರುವ ನಿರಂತರ ಸಂಸ್ಥೆಯನ್ನು ಗುರುಗಳಾದ ಸೋಮಶೇಖರ್ ಚೂಡನಾಥ್ ಮತ್ತು ಸೌಮ್ಯಾ ಸೋಮಶೇಖರ್ ಅವರ ನಿರ್ದೇಶನದಲ್ಲಿ ಸ್ಥಾಪಿಸಲಾಗಿದೆ.
ಶಿಸ್ತುಬದ್ಧ ತರಬೇತಿ, ಶಾಸ್ತ್ರೀಯ ಅಧ್ಯಯನ ಮತ್ತು ವೇದಿಕಾ ಅನುಭವಗಳ ಸಮನ್ವಯದ ಮೂಲಕ ವಿವಿಧ ವಯೋವರ್ಗಗಳ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರತಿಷ್ಠಿತ ವೇದಿಕೆಗಳಲ್ಲಿ ನೀಡಿದ ಅನೇಕ ಪ್ರದರ್ಶನಗಳ ಮೂಲಕ ಭಾರತೀಯ ನೃತ್ಯ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ನಿರಂತರ ಕೊಡುಗೆ ನೀಡುತ್ತಿದೆ.
ವಾರ್ಷಿಕವಾಗಿ ನಡೆಯುವ ‘ನಿರಂತರ ನೃತ್ಯ ಸಂಭ್ರಮ’ವು ಕಲಾವಿದರು ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಿದ್ದು, ಪರಂಪರೆಯಲ್ಲಿ ಬೇರುಬಿಟ್ಟ ಸಮಕಾಲೀನ ಅಭಿವ್ಯಕ್ತಿಯ ನೃತ್ಯರೂಪಗಳನ್ನು ರಸಿಕರಿಗೆ ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ.
ಏಕತೆಯಲ್ಲಿ ವೈವಿಧ್ಯ: ನಿರಂತರ ನೃತ್ಯ ಸಂಭ್ರಮ
ಭರತನಾಟ್ಯ–ಕುಚಿಪುಡಿ–ಯಕ್ಷಗಾನ: ಒಂದೇ ವೇದಿಕೆಯಲ್ಲಿ
ಈ ವರ್ಷದ ನೃತ್ಯೋತ್ಸವದಲ್ಲಿ ನಿರಂತರ ಶಾಲಾ ಆಫ್ ಡ್ಯಾನ್ಸ್ ತಂಡ, ಕೃತಿಕಾ ಭಟ್, ಆಥಿರಾ ವರ್ಮಾ ಮತ್ತು ಅಂಜು ಪೀಟರ್ ಅವರಿಂದ ಪ್ರಸ್ತುತಗೊಳ್ಳುವ ‘ಮಾಧವಂ’ ವಿಶೇಷ ಆಕರ್ಷಣೆಯಾಗಲಿದೆ. ಜೊತೆಗೆ ಗುರು ಡಾ. ಮನಸಾ ಕಾಂತಿ ಅವರ ಶಿಷ್ಯರಿಂದ ನಾಟ್ಯ ಸಂಪದದ ಭರತನಾಟ್ಯ ಪ್ರದರ್ಶನ, ಕಲಾ ಕದಂಬದಿಂದ ಯಕ್ಷಗಾನ ಹಾಗೂ ಗುರು ಅರ್ಚನಾ ಪುಣ್ಯೇಶ್ ಅವರ ಶಿಷ್ಯರಿಂದ ಜತಿನ್ ಡ್ಯಾನ್ಸ್ ಅಕಾಡೆಮಿಯ ಕುಚಿಪುಡಿ ಪ್ರದರ್ಶನಗಳು ನಡೆಯಲಿವೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐಸಿಸಿಆರ್ ಬೆಂಗಳೂರು ವಲಯ ನಿರ್ದೇಶಕ ಶ್ರೀ. ಪರ್ಡೀಪ್ ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ. ಚಂದ್ರಶೇಖರ್ ಭಾಗವಹಿಸಲಿದ್ದಾರೆ.
ವಿಭಿನ್ನ ಶಾಸ್ತ್ರೀಯ ನೃತ್ಯರೂಪಗಳ ಸಂಗಮದ ಮೂಲಕ ಏಕತೆಯಲ್ಲಿ ವೈವಿಧ್ಯವನ್ನು ಸಾರುವ ಈ ನೃತ್ಯೋತ್ಸವವು ನಗರದ ಸಾಂಸ್ಕೃತಿಕ ರಂಗಕ್ಕೆ ಮತ್ತೊಂದು ಮೆರುಗು ನೀಡಲಿದೆ.
