ವೃತ್ತಿಪರತೆಯಲ್ಲಿ ಯಶಸ್ವೀಯಾಗಲು ಶಿಸ್ತು ಮತ್ತು ಧನಾತ್ಮಕ ಮನೋಭಾವ ಅವಶ್ಯಕ – ಸಲಿಂ ಭಾಷಾ ಅಭಿಮತ.
ವೃತ್ತಿಪರತೆಯಲ್ಲಿ ಯಶಸ್ವೀಯಾಗಲು ಶಿಸ್ತು ಮತ್ತು ಧನಾತ್ಮಕ ಮನೋಭಾವ ಅವಶ್ಯಕ – ಸಲಿಂ ಭಾಷಾ ಅಭಿಮತ.
ಕಲಬುರಗಿ : ಕಲ್ಯಾಣ ಕರ್ನಾಟಕದಲ್ಲಿರುವ ನಾವೆಲ್ಲರೂ ಸರಿಯಾದ ಉದ್ಯೋಗ ಪಡೆದು, ವ್ಯಕ್ತಿತ್ವ ವಿಕಸನವಾಗಲು ನಮ್ಮಲ್ಲಿ ಧನಾತ್ಮಕ ಮನೋಭಾವ ಮತ್ತು ಶ್ರದ್ಧಾ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಕೇವಲ ಪದವಿ ಪಡೆದರೆ ಸಾಲದು, ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸಿಂಹವಾಣಿ ಕರ್ನಾಟಕ ತಂಡದ ಸಂಪನ್ಮೂಲ ವ್ಯಕ್ತಿ ಸಲಿಂ ಭಾಷಾ ಅಭಿಪ್ರಾಯ ವ್ಯಕ್ತಪಡಿಸಿದರು. ಸಂದರ್ಶನವನ್ನು ಎದುರಿಸುವ ಆತ್ಮವಿಶ್ವಾಸ, ಸಂವಹನ ಕಲೆ ಹಾಗೂ ಕಾರ್ಪೊರೇಟ್ ಜಗತ್ತಿನಲ್ಲಿ ವೃತ್ತಿಪರತೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ವಿವರಿಸಿದರು. ಅವರು ಸಿಂಹವಾಣಿ ಕರ್ನಾಟಕ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ವೃತ್ತಿಪರ ಔದ್ಯೋಗಿಕ ಕೌಶಲ್ಯ ಕಲಿಕೆ ತರಬೇತಿ ಕಾರ್ಯಾಗಾರದಲ್ಲಿ ಅಭಿಪ್ರಾಯ ಹಂಚಿಕೊಂಡರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಅವರು ಕಾರ್ಯಾಗಾರದಲ್ಲಿ ಸಿಂಹವಾಣಿ ಕರ್ನಾಟಕ ತಂಡವು ಯುವಜನರಿಗಾಗಿ ಆಯೋಜಿಸಿದ್ದ "ಸಂದರ್ಶನ ಕೌಶಲ್ಯ, ಬಯೋಡಾಟಾ ಸಿದ್ಧಪಡಿಸುವಿಕೆ ಹಾಗೂ ಉದ್ಯೋಗಾನ್ವೇಷಣೆ" ಕುರಿತಾದ ವಿಶೇಷ ತರಬೇತಿ ನೀಡಿದರು. ಪರಿಣಾಮಕಾರಿ 'ಬಯೋಡಾಟಾ' ಸಿದ್ಧಪಡಿಸುವ ವಿಧಾನ, ಆನ್‌ಲೈನ್ ವೇದಿಕೆಗಳ ಮೂಲಕ ಉದ್ಯೋಗ ಹುಡುಕುವ ತಂತ್ರಗಳು ಮತ್ತು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು. ಆಧುನಿಕ ಶೈಲಿಯ ರೆಸ್ಯೂಮ್ ಸಿದ್ಧಪಡಿಸುವದು ಅತ್ಯಂತ ಅವಶ್ಯಕ ಕೌಶಲ್ಯ. ಸಂದರ್ಶನದ ಸಮಯದಲ್ಲಿ ಕೇಳಲಾಗುವ ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರ ನೀಡುವ ಕಲೆಯ ಮಹತ್ವ. ಉದ್ಯೋಗದ ಪೋರ್ಟಲ್‌ಗಳ ಸಮರ್ಪಕ ಬಳಕೆ. ವೃತ್ತಿಜೀವನದಲ್ಲಿ ಶಿಸ್ತು ಮತ್ತು ವೃತ್ತಿಪರತೆ ಹೆಚ್ಚಿಸುವ ಪ್ರಮುಖ ಅಂಶಗಳಾದ ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್, ಎಐ, ಇತರೆ ಕೌಶಲ್ಯಗಳನ್ನು ಕಲಿತು ವೃತ್ತಿಪರತೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಸಿಂಹವಾಣಿ ಕರ್ನಾಟಕ ತಂಡದ ಪದಾಧಿಕಾರಿಗಳು ಭಾಗವಹಿಸಿದ್ದರು. ಒಟ್ಟು 20 ಯುವಜನರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.
