ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಯಾಕಾಪೂರ್ ರಾಜೀನಾಮೆ

ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಯಾಕಾಪೂರ್ ರಾಜೀನಾಮೆ 

 ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ

ಚಿಂಚೋಳಿ : ವೈಯಕ್ತಿಕ ಕಾರಣಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಗಟ್ಟಿಗೊಳಿಸಲು ಸಾಧ್ಯ ವಾಗದ ಹಿನ್ನಲೆಯಲ್ಲಿ ಬೆಂಬಲಿಗರೊಂದಿಗೆ ಸಾಮೂಹಿಕವಾಗಿ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದ ಪಾರಾರ್ಜಿತ ಅಭ್ಯರ್ಥಿ ಸಂಜೀವನ್ ಆರ್. ಯಾಕಾಪೂರ್ ತಿಳಿಸಿದರು.

ಚಂದಾಪೂರದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ವರಿಷ್ಠರು 2023 ರ ಚಿಂಚೋಳಿ ಮೀಸಲು ವಿಧಾನ ಸಭೆ ಮತಕ್ಷೇತ್ರದಿಂದ ಟಿಕೇಟ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟು ಪಕ್ಷದಲ್ಲಿ ಗೌರವಯುತ್ತವಾಗಿ ನೋಡಿಕೊಂಡಿದ್ದಾರೆ. ಆದರೆ ಕೆಲವು ನನ್ನ ವೈಯಕ್ತಿಕ ಕಾರಣಗಳಿಂದಾಗಿ ಪಕ್ಷದ ಸಂಘಟನೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷದ ಸಂಘಟನೆಗೆ ಮುಂದೆ ನನ್ನಿಂದ ಪಕ್ಷಕ್ಕೆ ಮುಜುಗರ ಆಗದೇ ಇರಲಿ ಎಂಬ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಪಾತ್ರವನ್ನು ಅಂಚೆಯ ಮೂಲಕ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರಿಗೆ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಲಾಗಿದೆ. ಪ್ರಸ್ತುತ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಸೇರುವ ವಿಚಾರ ಹೊಂದಿಲ್ಲ. ಅಭಿಮಾನಿ,ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಡೆಯ ಬಗ್ಗೆ ವಿಚಾರಸಿ ತೀರ್ಮಾನ ತೆಗೆದುಕೊಳಲಾಗುತ್ತದೆ. ಅಲ್ಲಿಯವರೆಗೆ ಕ್ಷೇತ್ರದ ಅಭಿವೃದ್ಧಿಯ ಸಮಸ್ಯೆಗಳಿಗೆ ಸಾರ್ವಜನಿಕ ಸೇವೆಯಲ್ಲಿ ಸದಾ ಜನರ ಮಧ್ಯೆ ಇರುತ್ತೇನೆ ಎಂದರು.

ಬೆಂಬಲಿಗರಾದ ವಿಷ್ಣುಕಾಂತ ಮೂಲ್ಗೆ, ಗೌರಿಶಂಕರ ಸೂರವಾರ, ರಾಹುಲ್ ಯಾಕಾಪೂರ್, ರಘುವಿರ ದೇಸಾಯಿ, ಮಲ್ಲಿಕಾರ್ಜುನ ಪೂಜಾರಿ, ರೇವಣಸಿದ್ಪ್ಪ ಬುಬಲಿ, ನಾಗೇಂದ್ರಪ್ಪ ಗರಂಪಲಳ್ಳಿ, ಬಸವರಾಜಾ ಸಿರಸಿ, ಸೈಯದ್ ನಿಯಾಜ್ ಅಲಿ, ವಿರಾರೆಡ್ಡಿ ಚೆಟ್ನಳ್ಳಿ, ಅಹ್ಮದ್ ಬಾಗವಾನ್ ಅವರು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಾಗಿದೆ ಎಂದರು.