ಪ್ರಕಾಶಕ ಲೇಖಕ ಮತ್ತು ಓದುಗರ ನಡುವಿನ ಕೊಂಡಿ ಇದ್ದಂತೆ: ಮಾನಸ

ಪ್ರಕಾಶಕ ಲೇಖಕ ಮತ್ತು ಓದುಗರ ನಡುವಿನ ಕೊಂಡಿ ಇದ್ದಂತೆ: ಮಾನಸ

ಪ್ರಕಾಶಕ ಲೇಖಕ ಮತ್ತು ಓದುಗರ ನಡುವಿನ ಕೊಂಡಿ ಇದ್ದಂತೆ: ಮಾನಸ

 ಕಲಬುರಗಿ :ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಬಹುದೊಡ್ಡ ಕಾರ್ಯ ಪ್ರಕಾಶಕ ಮಾಡುತ್ತಾನೆ ಹೀಗಾಗಿ ಇಬ್ಬರ ನಡುವಿನ ಕೊಂಡಿಯಾಗಿ ಇಂದು ಪ್ರಕಾಶಕರು ನಿಂತಿ ದ್ದಾರೆ ಎಂದು ಪುಸ್ತಕಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು. ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಇತ್ತೀಚಿಗಿನ ದಿನಗಳಲ್ಲಿ ಕನ್ನಡ ಪ್ರಕಾಶೋದ್ಯಮ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾಗದ ಹಾಗೂ ಮುದ್ರಣ ವೆಚ್ಚ ದುಬಾರಿಯಾಗಿ ಕನ್ನಡ ಪ್ರಕಾಶೋದ್ಯಮವನ್ನು ತತ್ತರಿಸುವಂತೆ ಮಾಡಿದೆ. ಇದರಿಂದಾಗಿ ಪುಸ್ತಕಗಳ್ ಬೆಲೆಯೂ ಏರುತ್ತಿದೆ. ಹೆಚ್ಚುತ್ತಿರುವ ಪುಸ್ತಕ ಬೆಲೆಯಿಂದಾಗಿ ಕೊಳ್ಳುವವರ್ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ; ಕನ್ನಡದ ಪುಸ್ತಕೋದ್ಯಮ ಅಪಾಯದ ಅಂಚಿನಲ್ಲಿದೆ ಇತ್ಯಾದಿ ಮಾತುಗಳು ಸಾಹಿತ್ಯಿಕ ವಲಯಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಕೇಳಿ ಬರುತ್ತಿದೆ. ಸಮಸ್ಯೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಶೀಲಿಸಿ ದೃಢ ಹೆಜ್ಜೆಗಳನ್ನಿಡಬೇಕಿದೆ. ಒಂದು ಗಮನಾರ್ಹ ಅಂಶವೆಂದರೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕನ್ನಡ ಪುಸ್ತಕಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರುತ್ತಿದೆ ಅದಕ್ಕೆಲ್ಲ ಸಿದ್ದಲಿಂಗೇಶ್ವರ ಪ್ರಕಾಶನದಂತಹ ಪ್ರಕಾಶಕರ ಗಟ್ಟಿ ನಿರ್ಧಾರವೆ ಕಾರಣ ಎಂದರು. ಸಲಹಾ ಸಮಿತಿ ಹಿರಿಯ ಸದಸ್ಯರಾದ ಪ್ರೊ.ಶಿವರಾಜ ಪಾಟೀಲ ಮಾತನಾಡಿ ’ಪುಸ್ತಕೋದ್ಯಮ ಬಹು ಕಷ್ಟಕರ ಉದ್ಯಮ. ಒಬ್ಬ ಪ್ರಕಾಶಕ ತಾನು ಎಷ್ಟೇ ಹಣ ಹಾಕಿದರೂ ಹಿಂಪಡೆಯಲು ಒಂದು ವರ್ಷವಾದರೂ ಬೇಕು. ಈಗ ಗ್ರಂಥಾಲಯ ದಲ್ಲಿ ಪುಸ್ತಕ ಖರೀದಿಸುವ ಯೋಜನೆಯಿದ್ದರೂ ಪುಸ್ತಕ ಸರಬರಾಜು ಮಾಡಿ ಹಣಕ್ಕೆ ಕಾಯಬೇಕಾದ ಪರಿಸ್ಥಿತಿ ಇದೆ' ಎಂದರು. 'ಕನ್ನಡ ಪುಸ್ತಕ ಪ್ರಕಾಶಕರ ಕನಿಷ್ಠ 300 ಪ್ರತಿಗಳು ವ್ಯಾಪಾರವಾದರೆ ಅವರು ನಿರಾಳವಾಗಿ ಉಸಿರಾಡಬಹುದು ಎಂಬುದಾಗಿ ಹಾ.ಮಾ.ನಾಯಕರು ಹೇಳುತ್ತಿದ್ದರು.ಗ್ರಂಥಾಲಯ ಪುಸ್ತಕ ಖರೀದಿ ಯೋಜನೆಯಿಂದ ಅದು ಸಾಕಾರವಾಗಿದೆ. ಆದರೆ, ಈ ಯೋಜನೆ ಇದೆ ಎಂದು ಪ್ರಕಾಶಕರಾಗುವುದು, ಪುಸ್ತಕ ಪ್ರಕಟಿಸುವುದು ಬೇಡ. ದುರದೃಷ್ಟಕರವೆಂದರೆ ಶಿಕ್ಷಣ ಇಲಾಖೆಯ ಸಗಟು ಖರೀದಿ ಯೋಜನೆ ಮತ್ತು ಪುಸ್ತಕ ಪ್ರಾಧಿಕಾರ ಖರೀದಿಸುವ ಪುಸ್ತಕ ಯೋಜನೆ ನಿಂತಿದೆ ಅದನ್ನು ಮುಂದುವರಿಸಬೇಕು ಜೊತೆಗೆ ವಚನ ಸಾಹಿತ್ಯ ಹಾಗೂ ಕವಿರಾಜಮಾರ್ಗದಂತಹ ಕೃತಿ ಕೊಟ್ಟ ನೆಲದಲ್ಲಿ ಪ್ರಕಾಶಕರ ಸಮ್ಮೇಳನ ಆಯೋಜಿಸಬೇಕು ಎಂದರು. ಪ್ರಕಾಶಕರಾದ ಡಾ. ಬಸವರಾಜ ಕೊನೇಕ,ಪುಸ್ತಕ ಪ್ರಾಧಿಕಾರದ ರಿಜಿಸ್ಟ್ರಾರ ಕಿರಣಸಿಂಗ್,ಪ್ರಾಧಿಕಾರದ ಸದಸ್ಯ ಬಿ ಎಚ್.ನಿರಗುಡಿ,ಅಕಾಡೆಮಿ ಸದಸ್ಯ ಸಿದ್ದರಾಮ ಹೊನಕಲ್, ಸಲಹಾ ಸಮಿತಿಯ ಡಾ. ಗವಿಸಿದ್ದಪ್ಪ ಪಾಟೀಲ,ಡಾ.ಜಯದೇವಿ ಗಯಕವಾಡ,ಡಾ. ಚಿ.ಸಿ ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ,ಸಿದ್ದಲಿಂಗ ಕೊನೇಕ್,ಶರಣು ಕೊನೇಕ,ಡಾ.ಶ್ರೀಶೈಲ ನಾಗರಾಳ ಬಸವ ಪಾಟೀಲ ಜವಳಿ,ಡಾ.ರಾಜಕುಮಾರ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.