ಆಶಾ ಕಿರಣ ಕಲಾ ಟ್ರಸ್ಟ್‌ನಿಂದ ‘ಮರೆಯದ ಮಾಣಿಕ್ಯ ಪ್ರಶಸ್ತಿ–2025’ ಪ್ರದಾನ

ಆಶಾ ಕಿರಣ ಕಲಾ ಟ್ರಸ್ಟ್‌ನಿಂದ ‘ಮರೆಯದ ಮಾಣಿಕ್ಯ ಪ್ರಶಸ್ತಿ–2025’ ಪ್ರದಾನ

ಆಶಾ ಕಿರಣ ಕಲಾ ಟ್ರಸ್ಟ್‌ನಿಂದ ‘ಮರೆಯದ ಮಾಣಿಕ್ಯ ಪ್ರಶಸ್ತಿ–2025’ ಪ್ರದಾನ

ಆಶಾ ಕಿರಣ ಕಲಾ ಟ್ರಸ್ಟ್ (ರಿ), ಗೋಕಾಕ–ಬೆಂಗಳೂರು ವತಿಯಿಂದ ಮಾಗಡಿ ರಸ್ತೆಯ ಗಾಂಧಿ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ‘ಮರೆಯದ ಮಾಣಿಕ್ಯ ಪ್ರಶಸ್ತಿ–2025’ ಪ್ರದಾನ ಸಮಾರಂಭವು ಭಾವಪೂರ್ಣವಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ದೇವೇಂದ್ರಕುಮಾರ ಪತ್ತಾರ್ ಅವರು,

“ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಆಲೋಚನೆ ಇರಬೇಕು. ಸಾರ್ಥಕ ಬದುಕು ಇನ್ನೊಬ್ಬರಿಗೆ ಆದರ್ಶವಾದಾಗ ಮಾತ್ರ ಜೀವನಕ್ಕೆ ಅರ್ಥ ಸಿಗುತ್ತದೆ” ಎಂದು ಹೇಳಿದರು. ಸಮಾರಂಭದ ಅಂಗವಾಗಿ ಸಸಿ ನೆಡುವ ಮೂಲಕ ಪರಿಸರ ಸಂದೇಶವನ್ನೂ ನೀಡಲಾಯಿತು.

ಆಶಾ ಕಿರಣ ಕಲಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಶ್ರೀಮತಿ ಮಾಲತಿ ಶ್ರೀ ಮೈಸೂರು ಅವರು ಮಾತನಾಡಿ,

“ಬದುಕು ಕ್ಷಣಿಕ; ಮಾಡಿದ ಕೆಲಸ ಶಾಶ್ವತ. ಕೊನೆಗೆ ಉಳಿಯುವುದು ಒಳ್ಳೆಯ ಹೆಸರು ಮತ್ತು ಒಳ್ಳೆಯ ಸಾಧನೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಹಾಗೂ ಸಾಧಕರನ್ನು ಗೌರವಿಸುವುದೇ ನಮ್ಮ ಬದುಕಿನ ಸಾರ್ಥಕತೆ” ಎಂದರು. ತಮ್ಮ ಆದಾಯದ ಅರ್ಧ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟಿರುವುದನ್ನೂ ಅವರು ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಹಾಗೂ ಸಂಘಟಕ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ಮಾಲತಿ ಶ್ರೀ ಮೈಸೂರು ಅವರ ಚಿಂತನೆ, ಚೈತನ್ಯ ಮತ್ತು ಸೇವಾಭಾವ ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಶ್ರೀ ಜಗಳೂರು ಲಕ್ಷ್ಮಣರಾವ್ ಅವರು, ವೃದ್ಧಾಶ್ರಮದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವೆಂದೂ, ಹೆತ್ತವರನ್ನು ನಿರ್ಲಕ್ಷಿಸುವ ಇಂದಿನ ಸಾಮಾಜಿಕ ಸ್ಥಿತಿ ನೋವುಂಟುಮಾಡುವ ವಿಷಯವೆಂದೂ ಹೇಳಿದರು.

ಗಾಂಧಿ ವೃದ್ಧಾಶ್ರಮದ ಸಂಸ್ಥಾಪಕ ಅಧ್ಯಕ್ಷ ಡಾ. ಸಿ. ಉಗ್ರಯ್ಯ ಅವರು ಮಾತನಾಡಿ, ಆಶ್ರಮದ ಸೇವೆಯನ್ನು ದೇವರು ಕೊಟ್ಟ ಭಾಗ್ಯವೆಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 18 ಮಂದಿ ಸಾಧಕರಿಗೆ ‘ಮರೆಯದ ಮಾಣಿಕ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಮುಖ ಪುರಸ್ಕೃತರಲ್ಲಿ

ಶ್ರೀ ಧರ್ಮೇಂದ್ರ ಕುಮಾರ್, ಶ್ರೀ ದೇವೇಂದ್ರಕುಮಾರ ಪತ್ತಾರ್, ಶ್ರೀ ಜಗಳೂರು ಲಕ್ಷ್ಮಣರಾವ್, ಡಾ. ಅಪ್ಪಾಸಾಹೇಬ ಗಾಣಿಗೇರ, ಡಾ. ಸ್ವಾತಿ ಸುರೇಶ್ ಕುಂಬಾರ, ಡಾ. ಮಲಕಪ್ಪ (ಮಹೇಶ್), ಶ್ರೀ ಗೋವರ್ಧನ ಕೆ., ಶ್ರೀ ಜಿ.ಆರ್. ವೇಣುಗೋಪಾಲ್, ಡಾ. ಗೀತಾ ಹೆಚ್. ಕೈವಾರ, ಶ್ರೀಮತಿ ಪ್ರೇಮಾ ಬದಾಮಿ, ಶ್ರೀಮತಿ ಮಾಧುರಿ ದೇಶಪಾಂಡೆ, ಫಾ. ಆನಂದ್ ಎಸ್.ಡಿ.ಬಿ., ಶ್ರೀಮತಿ ವೀಣಾ ವಿ. ಸೇರಿದಂತೆ ಹಲವರು ಸೇರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಡಾ. ವೆಂಕಟೇಶ ಆರ್. ಚೌಥಾಯಿ, ಸ್ವಾಗತವನ್ನು ಶ್ರೀ ರವಿ ಸಾಸನೂರ, ವಂದನಾರ್ಪಣೆಯನ್ನು ಶ್ರೀ ಜಿ.ಆರ್. ವೇಣುಗೋಪಾಲ್ ಅವರು ನೆರವೇರಿಸಿದರು. ವೃದ್ಧಾಶ್ರಮದ ಹಿರಿಯರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.