ಕಲಬುರಗಿಯಲ್ಲಿ ಬಿಸಿಎಂ ಇಲಾಖೆಯ ಕೋಟ್ಯಾಂತರ ಟೆಂಡರ್ ಅವ್ಯವಹಾರದ ವಿರುದ್ಧ ಬೃಹತ್ ಪ್ರತಿಭಟನೆ

ಕಲಬುರಗಿಯಲ್ಲಿ ಬಿಸಿಎಂ ಇಲಾಖೆಯ ಕೋಟ್ಯಾಂತರ ಟೆಂಡರ್ ಅವ್ಯವಹಾರದ ವಿರುದ್ಧ ಬೃಹತ್ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಬಿಸಿಎಂ ಇಲಾಖೆಯ ಭಾರಿ ಅವ್ಯವಹಾರದ ವಿರುದ್ಧ ಬೃಹತ್ ಹೋರಾಟ

ಕಲ್ಯಾಣ ಕಹಳೆ ವಾರ್ತೆ ಕಲಬುರಗಿ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ ಹಾಗೂ ಆಹಾರೇತರ ಸಾಮಗ್ರಿಗಳನ್ನು ಸರಬರಾಜು ಮಾಡುವ ಟೆಂಡರ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಬೋಗಸ್ ಬಿಲ್‌ಗಳನ್ನು ಮಾಡಿಕೊಂಡು, ಟೆಂಡರ್ ಷರತ್ತುಗಳನ್ನು ಗಾಳಿಗೆ ತೂರಿ ಭಾರೀ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಇಂದು ಎಸ್‌ವಿಪಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.

ವಸತಿನಿಲಯಗಳಿಗೆ ಪ್ರತಿ ತಿಂಗಳು 2ನೇ ತಾರೀಖಿನೊಳಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬೇಕೆಂಬ ಸರ್ಕಾರದ ಸ್ಪಷ್ಟ ಆದೇಶ ಇದ್ದರೂ, ಯಾವುದೇ ವಸ್ತುಗಳನ್ನು ಸರಬರಾಜು ಮಾಡದೆ ಕೇವಲ ದಾಖಲೆಗಳಲ್ಲಿ ಮಾತ್ರ ಸರಬರಾಜು ಮಾಡಿದಂತೆ ತೋರಿಸಿ ಕೋಟ್ಯಾಂತರ ರೂಪಾಯಿ ಬಿಲ್‌ಗಳನ್ನು ಪಾವತಿಸಿಕೊಂಡಿರುವುದು ಬಹಿರಂಗವಾಗಿದೆ.

ವಾಹನ ಟ್ರ್ಯಾಕಿಂಗ್ ಕೊರತೆ, ಕಡ್ಡಾಯ ಲೇಬಲಿಂಗ್ ಉಲ್ಲಂಘನೆ, ಸ್ಥಳೀಯ ಗೋದಾಮು ಸ್ಥಾಪಿಸದಿರುವುದು, ಲ್ಯಾಬ್ ಟೆಸ್ಟಿಂಗ್ ವರದಿ ಸಲ್ಲಿಸದಿರುವುದು ಸೇರಿದಂತೆ ಅನೇಕ ಗಂಭೀರ ದೋಷಗಳು ದಾಖಲಾಗಿವೆ.

ಅಕ್ರಮದಲ್ಲಿ ಇಲಾಖೆಯ ಆಯುಕ್ತ ದಯಾನಂದ, ಉಪ ನಿರ್ದೇಶಕ ಸೋಮಶೇಖರ, ಕಚೇರಿ ಮೇಲ್ವಿಚಾರಕ ಮೊಹಮ್ಮದ್ ಆರಿಫ್ ವೊದ್ದಿನ್, ತಾಲ್ಲೂಕು ಕಲ್ಯಾಣಾಧಿಕಾರಿಗಳು ಹಾಗೂ ವಾರ್ಡನ್‌ಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ಉಪ ನಿರ್ದೇಶಕ ಸೋಮಶೇಖರ ಅವರು ವಿದ್ಯಾರ್ಥಿನಿಲಯಗಳಿಂದ ಬಯೋಮೆಟ್ರಿಕ್ ದಾಖಲೆ ಪಡೆಯದೆ, ನಿಲಯಪಾಲಕರಿಂದ ಬಲವಂತವಾಗಿ ‘ತಾಂತ್ರಿಕ ದೋಷ’ ಎಂದು ಪತ್ರ ಪಡೆದು, ಗುತ್ತಿಗೆದಾರರ ಬಿಲ್‌ಗಳನ್ನು ಅಕ್ರಮವಾಗಿ ಮಂಜೂರು ಮಾಡುತ್ತಿರುವುದು ದಾಖಲೆಗಳೊಂದಿಗೆ ಬಹಿರಂಗವಾಗಿದೆ.

ಹಾಗೂ ಗುತ್ತಿಗೆದಾರ ಸೌರಿ ರಾಜನ್ ಕೆ (CGECSL – ಕೇಂದ್ರೀಯ ಭಂಡಾರ್) ಇವರೂ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಇನ್ನೂ 22 ವರ್ಷಗಳಿಂದ ಕಲಬುರಗಿಯಲ್ಲೇ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮೇಲ್ವಿಚಾರಕ ಮೊಹಮ್ಮದ್ ಆರಿಫ್ ವೊದ್ದಿನ್ ಅವರ ವಿರುದ್ಧವೂ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿಯ ಆರೋಪ ಕೇಳಿಬಂದಿದ್ದು, ತಕ್ಷಣ ಸೇವೆಯಿಂದ ವಜಾಗೊಳಿಸಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಲಾಗಿದೆ.

ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳು:

* ಬಿಸಿಎಂ ಡಿಡಿ ಸೋಮಶೇಖರ, ಮೇಲ್ವಿಚಾರಕ ಮೊಹಮ್ಮದ್ ಆರಿಫ್ ವೊದ್ದಿನ್, ತಾಲ್ಲೂಕು ಕಲ್ಯಾಣಾಧಿಕಾರಿಗಳು ಮತ್ತು ವಾರ್ಡನ್‌ಗಳನ್ನು ಕೆಲಸದಿಂದ ವಜಾ ಮಾಡಬೇಕು

* ಗುತ್ತಿಗೆದಾರರ ಪರವಾನಗಿ ರದ್ದುಪಡಿಸಬೇಕು

* ಟೆಂಡರ್ ಅವ್ಯವಹಾರದ ಮೇಲೆ ಉನ್ನತ ಮಟ್ಟದ ತನಿಖೆ ನಡೆಯಬೇಕು

* ಅಕ್ರಮಕ್ಕೆ ಬೆಂಬಲ ನೀಡಿದ ಜಿಲ್ಲಾಡಳಿತ — ಜಿಲ್ಲಾಧಿಕಾರಿ (DC) ಮತ್ತು ಜಿಲ್ಲಾ ಪಂಚಾಯತ್ ಸಿಇಒ ಇವರನ್ನು ವರ್ಗಾವಣೆ ಮಾಡಬೇಕು

* ಇಲಾಖೆಯ ಸಚಿವ ಶಿವರಾಜ ತಂಗಡಗಿ ರಾಜೀನಾಮೆ ನೀಡಬೇಕು

ಈ ಕುರಿತು ಸಚಿವ ಶಿವರಾಜ ತಂಗಡಗಿ, ಇಲಾಖೆಯ ಆಯುಕ್ತ ದಯಾನಂದ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ತಕ್ಷಣ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಅವರು ರಕ್ಷಣೆಗೆ ಈ ವಿಷಯ ಕುರಿತು ಆದೇಶ ಹೊರಡಿಸಬೇಕು ಎಂದು ಹೇಳಿದರು.

ಈ ಬೃಹತ್ ಹೋರಾಟದಲ್ಲಿ ಎಂ.ಎಸ್. ಪಾಟೀಲ ನರಿಬೋಳ, ಶ್ರವಣಕುಮಾರ ನಾಯಕ, ಈಶ್ವರ ಹಿಪ್ಪರಗಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದರು.

ವರದಿ ಹಣಮಂತ ದಂಡಗುಲ್ಕರ್