ಮೊಬೈಲ್ ಬಳಕೆ ಮಹಿಳೆಯರಲ್ಲಿ ಎಚ್ಚರ ಅಗತ್ಯ: ಸುವರ್ಣಾ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ_ ಸೈಬರ್ ಅಪರಾಧ ಕುರಿತು ವಿಚಾರಗೋಷ್ಠಿ
ಮೊಬೈಲ್ ಬಳಕೆ ಮಹಿಳೆಯರಲ್ಲಿ ಎಚ್ಚರ ಅಗತ್ಯ: ಸುವರ್ಣಾ
ಕಲಬುರಗಿ: ಪ್ರಸಕ್ತ ಸೈಬರ್ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಅಮಾಯಕ ಹೆಣ್ಣು ಮಕ್ಕಳು ಈ ಜಾಲಕ್ಕೆ ಸಿಲುಕಿ ಮೋಸ ಹೋಗುತ್ತಿರುವುದರಿಂದ ಮಹಿಳೆಯರು ಹೆಚ್ಚು ಜಾಗೃತರಾಗಬೇಕು ಎಂದು ಕಲಬುರಗಿ ಸೈಬರ್ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕಿ ಕು. ಸುವರ್ಣಾ ಹೇಳಿದರು.
ಕಲಬುರಗಿಯ ಸಾಯಿ ಮಂದಿರ ಸಭಾಂಗಣದಲ್ಲಿ ಡಿ. 10ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಘಟಕದ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ " ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿನ ಸೂಕ್ಷ್ಮತೆಗಳು" ಕುರಿತು ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಮೊಬೈಲ್ ನಲ್ಲಿ ಬಂದ ಆ್ಯಪ್ ಗಳನ್ನು ಹಾಗೂ ಅನಾಮಿಕ ಕಾರ್ಯಗಳನ್ನು ಸ್ವೀಕರಿಸಲು ಹೋಗಿ ವೈಯಕ್ತಿಕ ದಾಖಲೆಗಳನ್ನು ಬಹಿರಂಗಪಡಿಸುವುದರಿಂದ ಲಕ್ಷಾನುಗಟ್ಟಲೆ ಹಣ ಕಳೆದುಕೊಳ್ಳುವ ಹಾಗೂ ಆತ್ಮಹತ್ಯೆಯಂತಹ ಘಟನೆಗಳು ಸಂಭವಿಸುತ್ತಿವೆ. ಬ್ಯಾಂಕ್ ಮತ್ತು ಪೊಲೀಸರು ಎಂದು ನಕಲಿ ಕರೆ ಮಾಡಿ ಉದ್ಯೋಗದ ಆಮಿಷವೊಡ್ಡಿ ಮೊಬೈಲನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ.ಮಹಿಳೆಯರ ವೈಯಕ್ತಿಕ ಫೋಟೋಗಳನ್ನು ಬಳಸಿ ಬೆದರಿಸುವ ಜಾಲ ಕೂಡ ಹರಡಿಕೊಂಡಿದ್ದು ಅದಕ್ಕಾಗಿ ಮಹಿಳೆಯರು ಮೊಬೈಲನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಹಾಗೂ ಇಂತಹ ಘಟನೆಗಳು ಸಂಭವಿಸಿದಲ್ಲಿ ಕೂಡಲೇ 1930 ಸಹಾಯವಾಣಿ ದೂರವಾಣಿಗೆ ಕರೆ ಮಾಡಿ ತಿಳಿಸಬೇಕು ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಹಾಗು ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ ಜಾಗೃತ ಮಹಿಳೆಯರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣದತ್ತ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಗೊಳಿಸುತ್ತಿದೆ. ನಾರಿ ಶಕ್ತಿ ರಾಷ್ಟ್ರ ಶಕ್ತಿಯಾಗಿ ಎದ್ದು ನಿಲ್ಲಲು ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದಿರೋದು ಹಾಗೂ ಅದಕ್ಕಾಗಿ ಇಂತಹ ಜಾಗೃತಿ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಕಲಬುರಗಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡು ಈಗ ದಶಕಗಳ ಸಂಭ್ರಮ. ಈಗಾಗಲೇ 15,000 ಸಂಘಗಳ ರಚನೆಯಾಗಿದೆ. ಒಟ್ಟು 13,800 ಸದಸ್ಯರಿದ್ದಾರೆ ಸಾವಿರದ ನೂರು ಜನ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ವಾತ್ಸಲ್ಯ ಮನೆ ನಿರ್ಮಾಣ, ಜನಮಂಗಳ, ಸುಜ್ಞಾನ ನಿಧಿ ಯೋಜನೆ ಶಿಕ್ಷಕರ ನೇಮಕ, ದುಶ್ಚಟ ಮುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಕೆರೆ ಪುನರುಜ್ಜೀವನ ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 247 ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಸಂಘಗಳ ಮೂಲಕ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಂಗುಲಾಂಬಿಕಾ ಆಯುರ್ವೇದಿಕ್ ಕಾಲೇಜಿನ ಬಾಲ ರೋಗ ವಿಭಾಗ ಮುಖ್ಯಸ್ಥರಾದ ಡಾ. ವೀಣಾ ಜಿಗಳೂರು ಅಧ್ಯಕ್ಷತೆ ವಹಿಸಿದ್ದರು. ಫಲಾನುಭವಿ ಸುನಂದಾ ಮಾತನಾಡಿದರು.
ಕಲಬುರಗಿ ತಾಲೂಕು ಯೋಜನಾಧಿಕಾರಿ ರಿಯಾಜ್ ಅತ್ತಾರ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ವಿಭಾಗಿಯ ಯೋಜನಾಧಿಕಾರಿ ಜ್ಯೋತಿ ಜೋಳದ್, ಜನ ಜಾಗೃತಿ ಸದಸ್ಯರಾದ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಮಹಿಳಾ ಫಲಾನುಭವಿಗಳು ಉತ್ಪಾದನೆ ಮಾಡಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಸಿರಿಧಾನ್ಯ ಜಾಗೃತಿ ಜ್ಯೋತಿ, ಯೋಜನೆಯ ಸಂದೇಶ ಸಾರುವ ಫಲಕ ಹಿಡಿದ ಮದುಮಗಳ ಸ್ಪರ್ಧಾ ಕಾರ್ಯಕ್ರಮ ನೆರವೇರಿತು.
