ಕಲಬುರಗಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ
ಕಲಬುರಗಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ
ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ನವೆಂಬರ್ 14ರಿಂದ 20ರವರೆಗೆ ವಿಶೇಷವಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಇಂದು ಕಾಲೇಜಿನಲ್ಲಿ ಭಾವೈಕ್ಯತೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಪರಮೇಶ್ವರ್, ಉಪ ನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ ಕಲಬುರಗಿ, ವಿದ್ಯಾರ್ಥಿನಿಯರಿಗೆ ಪುಸ್ತಕ ಓದುವ ಮಹತ್ವ, ಶೈಕ್ಷಣಿಕ ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿತಕರವಾದ ಓದು ಪದ್ಧತಿ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಬಳಕೆ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಕೊಂಡ ಮಾತನಾಡಿ, ವಿದ್ಯಾರ್ಥಿನಿಯರು ಪ್ರತಿದಿನ ಬೆಳಿಗ್ಗೆ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೂಟದ ಆರಂಭದಲ್ಲಿ ಕುಮಾರಿ ಆಶಾ ಪ್ರಾರ್ಥನಾ ಗೀತೆ ಹಾಡಿ ಕಾರ್ಯಕ್ರಮಕ್ಕೆ ಭಾವಪೂರ್ಣ ಆರಂಭ ನೀಡಿದರು. ಗ್ರಂಥಾಪಾಲಕ ಶರಣಪ್ಪ ಸ್ವಾಗತ ಭಾಷಣ ಮಾಡಿದರು. ನಿರೂಪಣೆ ಮತ್ತು ವಂದನಾರ್ಪಣೆಯನ್ನು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜ್ಯೋತಿಪ್ರಕಾಶ ದೇಶಮುಖ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಸದಸ್ಯರಾದ ಡಾ. ಶುಭಾಶಚಂದ್ರ ದೊಡ್ಡಮನಿ, ಡಾ. ವಿಶ್ವನಾಥ್ ದೇವರಮನಿ, ಗ್ರಂಥಾಲಯ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹಾಗೂ ಅನೇಕ ಸಂಖ್ಯೆಯ ವಿದ್ಯಾರ್ಥಿನಿಯರು ಭಾಗವಹಿಸಿದರು.
