ನಿಜಲಿಂಗಪ್ಪ ಹಾಲ್ವಿಗೆ ಲಲಿತಕಲಾ ಅಕಾಡಮಿ ಪ್ರಶಸ್ತಿ

ನಿಜಲಿಂಗಪ್ಪ   ಹಾಲ್ವಿಗೆ ಲಲಿತಕಲಾ ಅಕಾಡಮಿ ಪ್ರಶಸ್ತಿ

ನಿಜಲಿಂಗಪ್ಪ  ಹಾಲ್ವಿಗೆ ಲಲಿತಕಲಾ ಅಕಾಡಮಿ ಪ್ರಶಸ್ತಿ 

ಯಾದಗಿರಿ: ಕರ್ನಾಟಕ ಲಲಿತಕಲಾ ಅಕಾಡೆಮಿ 2023-24ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ ಮಾಡಿದೆ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಖ್ಯಾತ ಕಲಾವಿದ ನಿಜಲಿಂಗಪ್ಪ ಹಾಲ್ಪಿಗೆ ಗೌರವ ಪ್ರಶಸ್ತಿ ಲಭಿಸಿದೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಿಜಲಿಂಗಪ್ಪ ಪ್ರಾಥಮಿಕ-ಪ್ರೌಢಶಿಕ್ಷಣವನ್ನು ಗುರುಮಠಕಲ್ ಸರಕಾರಿ ಶಾಲೆ, ಕಲಬುರಗಿ ಎಂ.ಎಂ.ಕೆ ಕಾಲೇಜ್ ಆಫ್‌ ವಿಷ್ಯುವಲ್‌ ಆರ್ಟ್‌ನಲ್ಲಿ ಪದವಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದಲೇ ಸ್ನಾತಕೋತ್ತರ ಪಡೆದಿದ್ದಾರೆ.

ಅವರು ಪದವಿ ಕಲಿತ ಎಂ.ಎಂ.ಕೆ ಕಾಲೇಜಿನಲ್ಲಿ ಐದು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿನ ಖಾಸಗಿ ಟೆಕ್ಸ್‌ ಟೈಲ್ಸ್ ಕಂಪನಿಗಳಲ್ಲಿ ಉದ್ಯೋಗಿಯಾಗಿ ಜೀವನ ನಡೆಸುತ್ತಿದ್ದಾರೆ. ಕಲೆಯ ಸೇವೆಯನ್ನು ಮೈಗೂಡಿಸಿಕೊಂಡ ಹಾಲ್ವಿ ಅವರು ಲ್ಯಾಂಡ್ ಸ್ಟೇಪ್, ಪೋಟ್ರೇಟ್, ವ್ಯಕ್ತಿ ಚಿತ್ರಣ, ಅಮೂರ್ತ ಕಲಾಕೃತಿಗಳನ್ನು ಮನಮೋಹಕವಾಗಿ ಚಿತ್ರಿಸುತ್ತಾರೆ. ತಮ್ಮ ಗುರುಗಳಾದ ವಿ.ಜಿ.ಅಂದಾನಿ, ಬಸವರಾಜ ಜಾನೆಯವರನ್ನು ಸದಾ ಸ್ಮರಿಸುವ ನಿಜಲಿಂಗಪ್ಪ ಅವರು ಕಲಾ ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದಾರೆ

ಕಲೆಗೆ ತಂದೆಯೇ ಪ್ರೇರಣೆ!

ಕಲಾವಿದ ನಿಜಲಿಂಗಪ್ಪ ಹಾಲ್ಪಿ ಅವರ ತಂದೆ ಬಸವರಾಜ ಹಾಲ್ಪಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಲ್ಲಿ ತಂದೆಯ ಜತೆಗೆ ಶಾಲೆಯ ಪ್ರಾಯೋಗಿಕ ಕಲಾತ್ಮಕ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ ನಿಜಲಿಂಗಪ್ಪನವರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತ್ತು. ಜನಸಂಖ್ಯೆ ಆಧಾರ ಇಟ್ಟುಕೊಂಡು ರಚಿಸಿದ ಚಿತ್ರ ಇಡೀ ಶಾಲೆಯೇ ಕೊಂಡಾಡುವ ಕ್ಷಣ ಎದುರಾದಾಗ ಹಾಲ್ವಿ ಅವರಿಗೆ ಚಿತ್ರಕಲೆಯಲ್ಲಿ ಅಗಾಧವಾದ ಪ್ರೀತಿ-ಪ್ರೇರಣೆ ದೊರಕಿತು

ಅನೇಕ ಕಡೆಗಳಲ್ಲಿ ಚಿತ್ರಕಲೆ ಪ್ರದರ್ಶನ ಮಾಡಿದ್ದಾರೆ.

ಕರ್ನಾಟಕ ರಾಜ್ಯೋತ್ಸವ, ಗುಲ್ಬರ್ಗ ವಿಶ್ವವಿದ್ಯಾಲಯದ ವಾರ್ಷಿಕ ಚಿತ್ರಕಲಾ ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಳ್ಳಿಹಬ್ಬದಲ್ಲಿ ಚಿತ್ರಕಲಾ ಪ್ರದರ್ಶನ, ಬೆಂಗಳೂರಿನಲ್ಲಿ ಮಿಕ್ಸಡ್ ಬ್ಯಾಗ್ ಪ್ರದರ್ಶನ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ, ಅಖಿಲ ಭಾರತ ರೇಖಾಚಿತ್ರ, ವರ್ಣಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಕಲಬುರಗಿ ವಿಶ್ವವಿದ್ಯಾಲಯ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುಭಾಶ್ಚಂದ್ರ ಪಾಟೀಲಸ್ಥಾರಕ ಜನಕಲ್ಯಾಣ ಪ್ರಶಸ್ತಿ, ಕಲಬುರಗಿಯ ದೃಶ್ಯ ಬೆಳಕು ಪ್ರಶಸ್ತಿ, ಡಾ|ಖಂಡೇರಾವ್ ಪ್ರತಿಷ್ಠಾನ ಪ್ರಶಸ್ತಿ, ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಜತೆಗೆ ವಿವಿಧ ಸಂಘ-ಸಂಸ್ಥೆಗಳು ನಿಜಲಿಂಗಪ್ಪನವರ ಕಲಾಸೇವೆ ಗುರುತಿಸಿ ಪುರಸ್ಕರಿಸಿವೆ.