ಸಚಿವಾಲಯದ ಹುದ್ದೆಗಳ ಪುನರ್‌ರಚನೆಗೆ ಆರೋಗ್ಯ ಇಲಾಖೆಯ ಮುಂದಾಳತ್ವ

ಸಚಿವಾಲಯದ ಹುದ್ದೆಗಳ ಪುನರ್‌ರಚನೆಗೆ ಆರೋಗ್ಯ ಇಲಾಖೆಯ ಮುಂದಾಳತ್ವ

ಸಚಿವಾಲಯದ ಹುದ್ದೆಗಳ ಪುನರ್‌ರಚನೆಗೆ ಆರೋಗ್ಯ ಇಲಾಖೆಯ ಮುಂದಾಳತ್ವ

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದ ಹಂತದಲ್ಲಿ ಸೇವಾ ವಿಷಯಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬ ನಿವಾರಣೆಗೆ ಇಲಾಖೆಯು ಹುದ್ದೆಗಳ ಪುನರ್‌ರಚನೆ ಕ್ರಮ ಕೈಗೊಂಡಿದೆ. ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತ ಆದೇಶ ಹೊರಡಿಸಿದ್ದಾರೆ.

ಜನಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವಾ ಸಂಬಂಧಿತ ವಿಷಯಗಳನ್ನು (ನೇಮಕಾತಿ, ವರ್ಗಾವಣೆ, ವಿಚಾರಣೆ, ಪಿಂಚಣಿ, ನ್ಯಾಯಾಲಯ ಪ್ರಕರಣಗಳು ಇತ್ಯಾದಿ) ಕಾಲಮಾನದೊಳಗೆ ಇತ್ಯರ್ಥಪಡಿಸುವುದು ಅತ್ಯಂತ ಅಗತ್ಯವೆಂದು ಸರ್ಕಾರ ತಿಳಿಸಿದೆ.

ಆದರೆ ಸಚಿವಾಲಯದ ಶಾಖೆಗಳಲ್ಲಿ ಕಡತಗಳ ನಿರ್ವಹಣೆಯಲ್ಲಿ ವಿಳಂಬವಾಗುತ್ತಿದ್ದು, ವಿಷಯ ನಿರ್ವಾಹಕರು, ಶಾಖಾಧಿಕಾರಿಗಳು ಮತ್ತು ಉಪ ಕಾರ್ಯದರ್ಶಿಗಳು ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಮಂಡಿಸುತ್ತಿರುವುದರಿಂದ ತೀರ್ಮಾನ ಕೈಗೊಳ್ಳುವಲ್ಲಿ ತಡವಾಗುತ್ತಿದೆ ಎಂದು ವರದಿಯಾಗಿದೆ.

ಈ ಹಿನ್ನೆಲೆ, ಸೇವಾ ವಿಷಯಗಳನ್ನು ನಿರ್ವಹಿಸುವ ಶಾಖೆಗೆ ಸಮರ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲು, ಉಪ ಕಾರ್ಯದರ್ಶಿ ಹುದ್ದೆಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಧಿಕಾರಿಗಳನ್ನು ನೇಮಿಸಲು ಹಾಗೂ ಅಪರ ಕಾರ್ಯದರ್ಶಿ ಮಟ್ಟದ ಹೊಸ ಹುದ್ದೆಯನ್ನು ಸೃಜಿಸಿ ಅದಕ್ಕೆ ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅದೇ ರೀತಿಯಲ್ಲಿ, ಸಚಿವಾಲಯದ ಸಮಗ್ರ ಪುನರ್‌ರಚನೆ ಅಗತ್ಯವಿದ್ದು, ಉನ್ನತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಪ್ರಮುಖ ಇಲಾಖೆಗಳ ಅಪರ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಕೆಎಎಸ್ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದು ಹಾಗೂ ಆಡಳಿತ ಸುಧಾರಣೆ ಇಲಾಖೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ.

ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಅವರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಿಳಿಸಲಾಗಿದೆ.