ಮೈಸೂರು ದಸರಾ ಕವಿಗೋಷ್ಠಿಗೆ ಶ್ರೀಮತಿ ಸುಲಕ್ಷಣಾ ಬಸವರಾಜ ಶಿವಪೂರ ಆಯ್ಕೆ

ಮೈಸೂರು ದಸರಾ ಕವಿಗೋಷ್ಠಿಗೆ ಶ್ರೀಮತಿ ಸುಲಕ್ಷಣಾ ಬಸವರಾಜ ಶಿವಪೂರ ಆಯ್ಕೆ
ಹುಬ್ಬಳ್ಳಿ: ಮುಂಬರುವ ಮೈಸೂರು ದಸರಾ ಕವಿಗೋಷ್ಠಿಗೆ ಹಾವೇರಿ ಜಿಲ್ಲೆಯ ಖ್ಯಾತ ಲೇಖಕಿ ಸುಲಕ್ಷಣಾ ಬಸವರಾಜ ಶಿವಪೂರ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಈ ತಿಂಗಳ 24ರಂದು ಮೈಸೂರಿನಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಲಿದ್ದಾರೆ.
ಸುಲಕ್ಷಣಾ ಶಿವಪೂರ ಮೂಲತಃ ಹಾವೇರಿಯವರು. ಅವರು ಕವಿತೆ, ಕತೆ, ಪ್ರವಾಸಕಥನ ಸೇರಿದಂತೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಮೌಲಿಕ ಹೆಜ್ಜೆ ಗುರುತು ಮೂಡಿಸಿದ್ದಾರೆ. ದಿನಪತ್ರಿಕೆಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳ ಮೂಲಕ ಸಾಹಿತ್ಯ ಸೇವೆ ನಿರಂತರವಾಗಿ ನೀಡುತ್ತಿದ್ದಾರೆ.
ಈವರೆಗೆ ಅವರು ಅಂತರಂಗದ ಅಲೆಗಳು (2007) ಕವನ ಸಂಕಲನ, ಬಾಳುವಂತ ಹೂವೆ ಕಾದಂಬರಿ, ಭಾವಬಿತ್ತಿದ ಅಕ್ಷರಗಳು ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸೃಜನಾತ್ಮಕ ಹಾಗೂ ಸೃಜನೇತರ ಕೃತಿಗಳನ್ನು ರಚಿಸಿರುವ ಅವರು ಹಿಂದಿ ಭಾಷೆಯಲ್ಲಿಯೂ 500ಕ್ಕೂ ಹೆಚ್ಚು ಶಾಯರಿಗಳನ್ನು ಬರೆದಿದ್ದಾರೆ ಹಾಗೂ ಇವರು ಬರೆದ "ಸಹನಾ" ಹಿಂದಿ ಕಾದಂಬರಿ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಯೂನಿವರ್ಸಿಟಿಯ BSc ಮತ್ತು BCA ಕೋರ್ಸ್ ನಾಲ್ಕನೇಯ ಸೆಮಿಸ್ಟರ್ ಗಳಿಗೆ ಬೇಸಿಕ್ ವಿಷಯವಾಗಿ ಆಯ್ಕೆಯಾಗಿದೆ. “ಶಾಲಾ ಮಕ್ಕಳ ಆರೋಗ್ಯ ಹಾಗೂ ಆಹಾರ” ಕುರಿತಂತೆ ಸಂಶೋಧನಾ ಕಾರ್ಯಗಳನ್ನು ಕೂಡ ಕೈಗೊಂಡಿದ್ದಾರೆ.
ಅವರ ಸಾಹಿತ್ಯ ಸೇವೆಗೆ ಪ್ರೊ. ಎಚ್.ಎಸ್.ಕೆ ನೆನಪಿನ ರಾಜ್ಯಮಟ್ಟದ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾವ್ಯ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವಿದ್ಯಾ ವಿಭೂಷಣ, ಹೆಮ್ಮೆಯ ಕನ್ನಡತಿ, ಕಲಬುರಗಿ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನೀಡುವ ಬಸವ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.ದೂರದರ್ಶನ ಚಂದನ ವಾಹಿನಿಯಲ್ಲಿ (DD-1) ದಿನಾಂಕ: 05.04.23ರಂದು 'ಶುಭೋದಯ ಕರ್ನಾಟಕ' ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಅತಿಥಿ ಸಾಹಿತಿಯಾಗಿ ಸಂದರ್ಶನದಲ್ಲಿ ಭಾಗವಹಿಸಿರುತ್ತಾರೆ. ಇದೇ ಅಲ್ಲದೆ, KLE - ಧ್ವನಿ,BVB-FM - 90.04 ರೇಡಿಯೋ ಚಾನೆಲ್ನಲ್ಲಿ ಹಾಗೂ ಆಕಾಶವಾಣಿ ಧಾರವಾಡ ಕೇಂದ್ರದಿಂದ "ವನೀತಾ ವಿಹಾರ" ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಚಿಂತನ ಹಾಗೂ ವಚನಾಮೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ
ಈ ಬಾರಿ ದಸರಾ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕವಿಗೋಷ್ಠಿಯಲ್ಲಿ ಸುಲಕ್ಷಣಾ ಬಸವರಾಜ ಶಿವಪೂರ ಅವರ ಭಾಗವಹಿಸುವಿಕೆ ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದ್ದು, ಕಾವ್ಯದ ಸೊಗಡಿಗೆ ಮತ್ತಷ್ಟು ಮೆರುಗು ನೀಡಲಿದೆ.