ಬಿಳವಾರ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ತನಿಖೆ ದಂಡುಗುಲ್ಕರ್ ಆಗ್ರಹ

ಬಿಳವಾರ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ತನಿಖೆ ಬೇಡಿಕೆ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯ ಹಣವನ್ನು ಸಂಪೂರ್ಣ ದುರುಪಯೋಗ ಮಾಡಿರುವುದಾಗಿ ಆರೋಪಿಸಿ, ಶ್ರೀ ಸಿದ್ದರಾಮೇಶ್ವರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘದ ಉಪಾಧ್ಯಕ್ಷರಾದ ಪರಶುರಾಮ್ ದಂಡುಗುಲ್ಕರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, “ಬಿಳವಾರ ಗ್ರಾಮ ಪಂಚಾಯತಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ತಕ್ಷಣವೇ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖಾ ತಂಡವನ್ನು ರಚಿಸಿ, ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಸರ್ಕಾರದ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ, ದುರ್ಬಳಿಕೆಯಾದ ಹಣವನ್ನು ದಂಡದ ರೂಪದಲ್ಲಿ ಮರಳಿ ಸರ್ಕಾರಕ್ಕೆ ವಸೂಲಿ ಮಾಡಬೇಕು” ಎಂದು ಆಗ್ರಹಿಸಿದರು.
ಅವರು ಇನ್ನಷ್ಟು ಸ್ಪಷ್ಟಪಡಿಸುತ್ತಾ, “ಒಂದು ವಾರದ ಒಳಗೆ ತನಿಖಾ ತಂಡ ರಚನೆ ಆಗದಿದ್ದರೆ ಹಾಗೂ ಕ್ರಮ ಕೈಗೊಳ್ಳದಿದ್ದರೆ, ಶ್ರೀ ಸಿದ್ದರಾಮೇಶ್ವರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ, ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುತ್ತದೆ. ಅಗತ್ಯವಿದ್ದಲ್ಲಿ ಕಾನೂನಾತ್ಮಕ ಹೋರಾಟಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ವರದಿ: ಜಟ್ಟಪ್ಪ ಎಸ್. ಪೂಜಾರಿ