ಬೇಲೂರ ಕ್ರಾಸ್ ನ ರಸ್ತೆ ಬದಿ ಅಂಗಡಿಗಳ ತೆರವಿಗೆ ಕನ್ನಡ ಭೂಮಿ ಜಾಗೃತಿ ಸಮಿತಿ ಒತ್ತಾಯ

ಬೇಲೂರ ಕ್ರಾಸ್ ನ ರಸ್ತೆ ಬದಿ ಅಂಗಡಿಗಳ ತೆರವಿಗೆ ಕನ್ನಡ ಭೂಮಿ ಜಾಗೃತಿ ಸಮಿತಿ ಒತ್ತಾಯ
ಕಲಬುರಗಿ: ಬೀದರ-ಕಲಬುರಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 218ರ ಬೇಲೂರ ಕ್ರಾಸ್ ನಲ್ಲಿ ಎಡ, ಬಲ ಬದಿಗಳಲ್ಲಿ ರಸ್ತೆಯ ಸಮೀಪವೇ ನಾನಾ ವಿವಿಧ ಅಂಗಡಿಗಳನ್ನು ತೆರೆದಿರುವುದು ಅಪಘಾತಕ್ಕೆ ಕಾರಣವಾಗಿದ್ದು ಕೂಡಲೇ ಅಂಗಡಿಗಳನ್ನು ತೆರವುಗೊಳಿಸುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ವಕ್ತಾರ ಆನಂದ ತೆಗನೂರ ಹಾಗೂ ಸಂಚಾಲಕ ಬಷೀರಸಾಬ್ ಟಪ್ಪಾ ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕಳೆದ ಸುಮಾರು ದಶಕಗಳಿಂದ ಬೇಲೂರ ಕ್ರಾಸ್ ಮಾರ್ಗವಾಗಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ರಸ್ತೆಯ ಸಮೀಪವೇ ನಾನಾ ವಿಧದ ಅಂಗಡಿಗಳನ್ನು ತೆರೆದು ವ್ಯಾಪಾರಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ
ಅಂಗಡಿಗಳು ನಡೆಸುತ್ತಿದ್ದು, ಇದರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ ಎಂಬುದು ಪ್ರಯಾಣಿಕರ ದೂರಾಗಿದೆ ಎಂದು ಅವರು ಆರೋಪಿಸಿದರು.ಅಲ್ಲದೇ, ರಸ್ತೆಯ ಸಮೀಪವೇ ಅಂಗಡಿಗಳನ್ನು ನಿರ್ಮಿಸಿರುವುದರಿಂದ ವಾಹನ ಸವಾರರು ರಸ್ತೆಯ ಪಕ್ಕದಲ್ಲೇ ವಾಹನ ನಿಲುಗಡೆ ಮಾಡಿ, ಖರೀದಿಗೆ ಮುಂದಾಗತೊಡಗುತ್ತಿದ್ದಾರೆ.ಇದರಿಂದಾಗಿ ವಾಹನ ದಟ್ಟಣೆ ಹೆಚ್ಚುವುದಲ್ಲದೆ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರದೇಶಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದು, ಪರಿಸ್ಥಿತಿ ಹೀಗಿದ್ದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲೀ ಇತ್ತ ಬಗ್ಗೆ ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ದೂರಿದರು.ಕೂಡಲೇ ಅಂಗಡಿಗಳನ್ನು ತೆರವುಗೊಳಿಸುವುದು ಅಥವಾ ಅದನ್ನು ರಾಷ್ಟ್ರೀಯ ಹೆದ್ದಾರಿಯಿಂದ ದೂರಕ್ಕೆ ಕಳುಹಿಸುವ ಕಾರ್ಯಾಚರಣೆಗೆ ಮುಂದಾಗದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.