ವಿದ್ಯಾನಗರದಲ್ಲಿ ಶ್ರಾವಣ ಮಾಸದಲ್ಲಿ ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಪುರಾಣ ಪ್ರವಚನ

ವಿದ್ಯಾನಗರದಲ್ಲಿ ಶ್ರಾವಣ ಮಾಸದಲ್ಲಿ ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಪುರಾಣ ಪ್ರವಚನ
ಕಲಬುರಗಿ ವಿದ್ಯಾನಗರ: ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರು ಇರುವ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ತನ್ನ ಇತ್ತೀಚಿನ ಜನರಲ್ ಬಾಡಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಪುರಾಣ ಹಾಗೂ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗದ್ದುಗೆ ಮಠದ ಪೂಜ್ಯ ಶ್ರೀ ಚರಲಿಂಗ ಸ್ವಾಮಿಗಳು ಪ್ರವಚನ ಮಾಡಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು, ಶ್ರೀ ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳು ಕನ್ನಡ ನಾಡು ಕಂಡ ಅಮೂಲ್ಯ ಮಠಾಧಿಪತಿಗಳಾಗಿ, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರ ಸ್ಥಾಪನೆ ಮೂಲಕ ಸಮಾಜದ ಪುನರುತ್ಥಾನದ ಕಾರ್ಯ ಮಾಡಿರುವುದನ್ನು ಸ್ಮರಿಸಿದರು.
ಸಮಾಜದ ಬೆಳವಣಿಗೆಯ ಹಿತದೃಷ್ಟಿಯಿಂದ ನಡೆಯುವ ಈ ಪುರಾಣ ಕಾರ್ಯಕ್ರಮವು ಶ್ರಾವಣ ಮಾಸದಲ್ಲಿ ವಿಶೇಷ ಮಹತ್ವ ಪಡೆದಿದ್ದು, ೨೬.೦೭.೨೦೨೫ ರಿಂದ ಆರಂಭವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಕಾರ್ಯಕ್ರಮದ ವೆಚ್ಚ ನಿರ್ವಹಣೆಗೆ ಕಾಲೋನಿಯ ಪ್ರತಿಯೊಬ್ಬ ಸದಸ್ಯರಿಂದ ರೂ. ೨೫೦೦ ದೇಣಿಗೆ ಸಂಗ್ರಹಿಸುವ ನಿರ್ಧಾರವಾಯಿತು.
ಸಭೆಯಲ್ಲಿ ಮಠದ ಗೊಬ್ಬಾರವನ್ನು ತಡೆಯುವ ನಿಟ್ಟಿನಲ್ಲಿ ಕಂಪೌಂಡ್ ಗೋಡೆಯ ಎತ್ತರ ಹೆಚ್ಚಿಸಿ ತಂತಿ ಅಳವಡಿಸುವ ನಿರ್ಧಾರವೂ ಕೈಗೊಳ್ಳಲಾಯಿತು. ಇದಲ್ಲದೆ, ಕಾಲೋನಿಯ ಸದಸ್ಯರು ಅಥವಾ ಅವರ ಕುಟುಂಬ ಸದಸ್ಯರು ನಿಧನರಾದಾಗ ಅಂತ್ಯಕ್ರಿಯೆಗಾಗಿ ಸೊಸೈಟಿ ವತಿಯಿಂದ ವಾಹನ ವ್ಯವಸ್ಥೆ ಕಲ್ಪಿಸುವ ಉದ್ದೇಶವೂ ಗಟ್ಟಿಯಾದ ನಿರ್ಧಾರವಾಗಿ ಹೊರಹೊಮ್ಮಿದೆ.
ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉಮೇಶ ಶೆಟ್ಟಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಪದಾಧಿಕಾರಿಗಳಾದ ಬಸವರಾಜ ಪುಣ್ಯಶೆಟ್ಟಿ, ಸುಭಾಷ ಮಂಠಾಳೆ, ಶಾಂತಯ್ಯ ಬೀದಿಮನಿ, ಸಿದ್ರಾಮಪ್ಪ ಬಿರಾದಾರ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.