ಅಥಣಿಯಲ್ಲಿ ಭೀಕರ ಅಪಘಾತ; ಕಾರು-ಬಸ್ ಡಿಕ್ಕಿ – ಅಫಜಲಪುರ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ

ಅಥಣಿಯಲ್ಲಿ ಭೀಕರ ಅಪಘಾತ; ಕಾರು-ಬಸ್ ಡಿಕ್ಕಿ – ಅಫಜಲಪುರ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ
ಬೆಳಗಾವಿ, ಜುಲೈ 6:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ಮೂಲದ ಗಿರೀಶ ಬಳೂರರ್ಗಿ, ರಾಹುಲ್ ಮ್ಯಾಳೇಶಿ ಮತ್ತು ಸಂಗು ಅಮರಗೊಂಡ ಎಂಬವರು ದುರಂತವಾಗಿ ಮೃತಪಟ್ಟಿದ್ದಾರೆ.
ಮೃತರು ಕೊಲ್ಹಾಪುರ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಮುರಗುಂಡಿಯ ಬಳಿ ಎದುರಿನಿಂದ ಬಂದ ಸಾರಿಗೆ ಬಸ್ ಕಾರಿಗೆ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿದ್ದ ಮತ್ತೊಬ್ಬ ಮಹಿಳೆ ರಾಧಿಕಾ ಮ್ಯಾಳೇಶಿ ಗಂಭೀರವಾಗಿ ಗಾಯಗೊಂಡು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಮಾಹಿತಿ ದೊರಕಿದ ಕೂಡಲೇ ಅಥಣಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಪಘಾತ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದುರಂತದಿಂದ ಪ್ರದೇಶದಲ್ಲಿ ತೀವ್ರ ವಿಷಾದದ ಛಾಯೆ ಮೂಡಿದೆ.