ಶಿಕ್ಷಕ ರೇವಣಸಿದ್ದಯ್ಯ ಮಠಪತಿ ಸೇವೆ ಅನುಕರಣೀಯ: ಶಿವಕುಮಾರ ಶಿವಾಚಾರ್ಯರು

ಶಿಕ್ಷಕ ರೇವಣಸಿದ್ದಯ್ಯ ಮಠಪತಿ ಸೇವೆ ಅನುಕರಣೀಯ:  ಶಿವಕುಮಾರ ಶಿವಾಚಾರ್ಯರು

ಸೇವಾ ನಿವೃತ್ತಿ ಪ್ರಯುಕ್ತ ಅಭಿನಂದನಾ ಸಮಾರಂಭ

ಶಾಮಲಾ ರೇವಣಸಿದ್ದಯ್ಯ ಮಠಪತಿ ದಂಪತಿಗೆ ಸೊಂತ ಹಿರೇಮಠದ ಶಿವಕುಮಾರ ಶಿವಾಚಾರ್ಯರು ಸನ್ಮಾನಿಸಿದರು

ಶಿಕ್ಷಕ ರೇವಣಸಿದ್ದಯ್ಯ ಮಠಪತಿ ಸೇವೆ ಅನುಕರಣೀಯ: ಶಿವಕುಮಾರ ಶಿವಾಚಾರ್ಯರು

ಚಿಂಚೋಳಿ:ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನರನಾಳದ ರೇವಣಸಿದ್ದಯ್ಯ ಮಠಪತಿ ಅವರ ಸೇವೆ ಅನುಕರಣೀಯವಾಗಿದೆ. ಪರಿಪೂರ್ಣ ವ್ಯಕ್ತಿತ್ವದ ತುಂಬಿದ ಕೊಡದಂತಿರುವ ಅವರು ನೋವುಂಡು ಸಮಾಜಕ್ಕೆ ನಲಿವು ಹಂಚಿದವರಾಗಿದ್ದಾರೆ ಎಂದು ಸೊಂತ ಹಿರೇಮಠದ ಶಿವಕುಮಾರ ಶಿವಾಚಾರ್ಯರು ತಿಳಿಸಿದರು.

ಅವರು ಕಲಬುರಗಿ ನಗರದ ಗೋಲ್ಡಹಬ್ ಮಾಲ್ನ ಸಿಟ್ರಾನ್ ಸಭಾಂಗಣದಲ್ಲಿ ನಡೆದ ರೇವಣಸಿದ್ದಯ್ಯ ಮಠಪತಿ ಅವರ ಸೇವಾನಿವೃತ್ತಿ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಶಾಮಲಾ ರೇವಣಸಿದ್ದಯ್ಯ ಮಠಪತಿ ದಂಪತಿಗೆ ಸನ್ಮಾನಿಸಿ ಮಾತನಾಡಿದರು.

ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿ, ರೇವಣಸಿದ್ದಯ್ಯ ಮಠಪತಿ ಒಬ್ಬ ಬಹುಮುಖ ಪ್ರತಿಭೆಯ ಶಿಕ್ಷಕ. ಯಾರ ಮನಸ್ಸನ್ನು ನೋಯಿಸದ ಮಾತೃ ಹೃದಯವುಳ್ಳವರು. ರಂಗಭೂಮಿ, ಜಾನಪದ ಹಾಗೂ ಹಾಸ್ಯ ಕಲಾವಿದರಾಗಿ, ಕವಿಗಳಾಗಿ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ತಿದ್ದಿ ತೀಡಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬಡತನದಲ್ಲಿ ಬೆಳೆದು ಬಂದರೂ ಕೂಡ ತಾವು ನಂಬಿದ ತತ್ವ ಸಿದ್ಧಾಂತ ಮತ್ತು ಜೀವನ ಮೌಲ್ಯಗಳು ಎತ್ತಿ ಹಿಡಿದು ನಮಗೆ ಮಾದರಿಯಾಗಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಸಂಸ್ಕಾರ ಪೂರ್ಣ ಸರಳ ಜೀವನ ನಡೆಸಿ, ಅಪಾರ ಸ್ನೇಹಿತರ ಬಳಗವನ್ನು ಹೊಂದಿರುವ ರೇವಣಸಿದ್ದಯ್ಯನವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಶಿಕ್ಷಕ ಬಸವರಾಜ ಐನೋಳ್ಳಿ, ವಕೀಲ ಮಲ್ಲಿಕಾರ್ಜುನ ಭಂಗಿಮಠ ಅವರು ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ವಿಜಯಕುಮಾರ ಪರೂತೆ, ನಿವೃತ್ತ ಪ್ರಾಂಶುಪಾಲ ರೇವಣಸಿದ್ದಪ್ಪ ದುಕಾನ್, ನಿವೃತ್ತ ಪ್ರಾಂಶುಪಾಲ ಚನ್ನಬಸಯ್ಯ ಹಿರೇಮಠ, ಸಾಹಿತಿ ಬಿ.ಎಚ್ ನಿರಗುಡಿ, ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಲಕ್ಷ್ಮಿ ನರಸಿಂಹರೆಡ್ಡಿ ನರನಾಳ್, ಚಿಮ್ಮನಚೋಡ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಗುತ್ತಿಗೆದಾರ ಬಸವರಾಜ ದಂಡಿನ್, ಬಸವ ಪಿಯು ಕಾಲೇಜಿನ ಅಧ್ಯಕ್ಷ ಶಿವಾನಂದ ಹಾಗರಗಿ, ಕೋಡ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ರಾಜಶೇಖರ ಮಾಂಗ್, ತುಕಾರಾಮ ಚಿತ್ತಾಪುರ, ನವಿನ್, ಸಚಿನ್, ರೇವಣಸಿದ್ದಪ್ಪ ದಂಡಿನ ಮೊದಲಾದವರು ಇದ್ದರು. ಬಸಯ್ಯ ಸ್ವಾಮಿ ಮಠಪತಿ ಪ್ರಾರ್ಥಿಸಿದರು. ಸೂರ್ಯಕಾಂತ ಮಠ ಸ್ವಾಗತಿಸಿದರು. ಆರ್.ಜೆ ಮಂಜು ನಿರೂಪಿಸಿದರು. ರಾಜು ಹಿರೇಮಠ ವಂದಿಸಿದರು. ಸಚಿನ ಜಾಧವ ಗಾಯನ ನಡೆಸಿಕೊಟ್ಟರು.