ಆರ್ಥಿಕವಾಗಿ ದುರ್ಬಲರಿಗೆ ರೋಗಶ್ರಯ: ಡಾ. ಶರಣ್ ಪ್ರಕಾಶ್ ಪಾಟೀಲ್ ನಿರ್ದೇಶನ

ಆರ್ಥಿಕವಾಗಿ ದುರ್ಬಲರಾದವರನ್ನು ಒಳರೋಗಿಗಳಾಗಿ ಸೇರಿಸಿಕೊಳ್ಳಲು ಡಾ. ಶರಣ್ ಪ್ರಕಾಶ್ ಪಾಟೀಲ್ ಸೂಚನೆ
ಕಿದ್ವಾಯಿ ಅಧಿಕಾರಿಗಳ ಜೊತೆ ಸಭೆ; ಸುತ್ತೋಲೆ ಜಾರಿ
ಬೆಂಗಳೂರು, ಮಾರ್ಚ್ 28: ವೈದ್ಯಕೀಯ ತಪಾಸಣೆಗಾಗಿ ದೂರದ ಊರುಗಳಿಂದ ಪ್ರಯಾಣ ಮಾಡುವ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಹಾಕದೇ, ಅವರನ್ನು ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕು ಎಂದು ಕಿದ್ವಾಯಿ ಆಡಳಿತ ಮಂಡಳಿ ಅಧಿಕಾರಿಗಳಿಗೆ *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ಬಡರೋಗಿಗಳ ಆರ್ಥಿಕ ಹೊರೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಅಂತಿಮ ಆರೋಗ್ಯ ತನಿಖಾ ವರದಿಗಳು ನೀಡುವವರೆಗೆ ಅಂತಹ ರೋಗಿಗಳನ್ನು ಆಸ್ಪತ್ರೆಯ ವಾರ್ಡ್ ಗಳಲ್ಲಿ ಒಳರೋಗಿಗಳಾಗಿ ಸೇರಿಸಿಕೊಳ್ಳುವಂತೆ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ (ಕೆಎಂಐಒ) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೆಎಂಐಒದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ದೇಶನವನ್ನು ಮೊದಲು ನೀಡಲಾಗಿತ್ತಾದರೂ, ಶುಕ್ರವಾರ ಡಾ. ಪಾಟೀಲ್ ಅವರು ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತವಾಗಿ ಆದೇಶ ಹೊರಡಿಸಿ ಜಾರಿಗೆ ತರಲಾಯಿತು.
ಪರಿಶೀಲನೆಯ ಸಮಯದಲ್ಲಿ, ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಆಸ್ಪತ್ರೆಯ ಹಾಸಿಗೆಗಳು ಶೇಕಡ 70ಕ್ಕಿಂತ ಕಡಿಮೆ ಭರ್ತಿಯಾಗಿರುವುದು ಏಕೆ ಎಂದು ಸಚಿವರು ಪ್ರಶ್ನಿಸಿದರು.
ಅಂತಿಮ ರೋಗನಿರ್ಣಯದ ನಂತರವೇ ಒಳರೋಗಿಗಳಾಗಿ ಸೇರಿಸಿಕೊಳ್ಳಲಾಗುವುದು. ಆರಂಭಿಕ ರೋಗನಿರ್ಣಯ ಮತ್ತು ಅವರ ಅಂತಿಮ ಆರೋಗ್ಯ ವರದಿಗಳ ವಿತರಣೆ ಆಗುವವರೆಗೂ ರೋಗಿಗಳು ಹೊರಗುಳಿಯುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೆಎಂಐಒ ತನ್ನ ನೀತಿಯನ್ನು ಬದಲಾಯಿಸಲು ಮತ್ತು ಈ ಮಧ್ಯಂತರ ಅವಧಿಯಲ್ಲಿ ರೋಗಿಗಳನ್ನು ವಾರ್ಡ್ಗಳಿಗೆ ಸೇರಿಸಲು ಸೂಚನೆ ನೀಡಿದರು.
ಅನೇಕ ರೋಗಿಗಳು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಅಂತಿಮ ವರದಿ ಬರುವವರೆಗೂ ಬೆಂಗಳೂರಿನಲ್ಲಿ ಖಾಸಗಿ ವಸತಿ ಸೌಕರ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಇದು ಅಗತ್ಯವಿಲ್ಲದಿರಬಹುದು, ದೂರದ ಪ್ರದೇಶಗಳಿಂದ, ವಿಶೇಷವಾಗಿ ಉತ್ತರ ಕರ್ನಾಟಕದಿಂದ ಬರುವ ರೋಗಿಗಳಿಗೆ, ಇದು ಅತ್ಯಗತ್ಯ" ಎಂದು ಡಾ.ಪಾಟೀಲ್ ಹೇಳಿದರು.
ಅಂತಿಮ ವರದಿಗಳನ್ನು ನೀಡಲು ಒಂದೆರಡು ದಿನಗಳು ತೆಗೆದುಕೊಳ್ಳಬಹುದು, ಈ ಅವಧಿಯಲ್ಲಿ ಒಳರೋಗಿಗಳಾಗಿ ದಾಖಲಾಗಲು ಬಯಸುವವರಿಗೆ ಒಪ್ಪಿಗೆ ಪತ್ರವನ್ನು ಒದಗಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರದಿಗಳಿಗಾಗಿ ಕಾಯುತ್ತಿರುವ ರೋಗಿಗಳಿಗೆ ಉಚಿತ ವಸತಿ ಮತ್ತು ಊಟವನ್ನು ಸಹ ನೀಡುತ್ತದೆ. ಆದಾಗ್ಯೂ, ಹಾಸಿಗೆಗಳು ಲಭ್ಯವಿದ್ದಾಗಲೆಲ್ಲಾ, ರೋಗಿಗಳನ್ನು ಧರ್ಮಶಾಲೆಗೆ ಕಳುಹಿಸುವ ಬದಲು ಆಸ್ಪತ್ರೆ ವಾರ್ಡ್ಗಳಿಗೆ ದಾಖಲಿಸಬೇಕು. ಒಂದು ವೇಳೆ ಹಾಸಿಗೆಗಳು ತುಂಬಿದ್ದರೆ, ಅವರಿಗೆ ಧರ್ಮಶಾಲೆಯಲ್ಲಿ ಸ್ಥಳಾವಕಾಶ ಕಲ್ಪಿಸಬಹುದು" ಎಂದು ಡಾ. ಪಾಟೀಲ್ ಹೇಳಿದರು.
ಬಿಪಿಎಲ್ ವರ್ಗದವರಿಗೆ ಸೌಲಭ್ಯ
ಕಿದ್ವಾಯಿ ಆಸ್ಪತ್ರೆಗೆ ಬರುವ ಶೇ. 90ಕ್ಕಿಂತ ಹೆಚ್ಚು ರೋಗಿಗಳು ಬಿಪಿಎಲ್ ವರ್ಗವಾಗಿರುವುದರಿಂದ, ವಿಶೇಷ ವಾರ್ಡ್, ಶಾಂತಿಧಾಮ ಮತ್ತು ಅನಿಕೇತನ, ಅರೆ-ವಿಶೇಷ ವಾರ್ಡ್ ಅನ್ನು ಸಾಮಾನ್ಯ ವಾರ್ಡ್ ಗಳಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ನಿರ್ದೇಶನ ನೀಡಿದರು.
ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಪರಿಹಾರ ಒದಗಿಸುವುದು, ಗಂಭೀರ ಆರೋಗ್ಯ ತನಿಖೆಗಳನ್ನು ನಡೆಸುವಾಗ ಅವರಿಗೆ ಅಗತ್ಯವಾದ ಆರೈಕೆ ಮತ್ತು ಸೌಕರ್ಯವನ್ನು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಈ ನಿರ್ದೇಶನವನ್ನು ಜಾರಿಗೆ ತರಲು, KMIO ಇಂದು ಸುತ್ತೋಲೆ ಮತ್ತು ಒಪ್ಪಿಗೆ ಪತ್ರವನ್ನು ನೀಡಿದೆ.
ಇಂದು ನಡೆದ ಸಭೆಯಲ್ಲಿ ಕಿದ್ವಾಯಿ ಆಡಳಿತಾಧಿಕಾರಿ ವೈ ನವೀನ್ ಭಟ್ ಮತ್ತು ನಿರ್ದೇಶಕ ಡಾ.ನವೀನ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು