ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನ ಶಕ್ತಿ ಅಗತ್ಯ : ಸತೀಶ್ ಗುತ್ತೇದಾರ್

ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನ  ಶಕ್ತಿ ಅಗತ್ಯ : ಸತೀಶ್ ಗುತ್ತೇದಾರ್

ಬೆಂಗಳೂರಿನಲ್ಲಿ ಈಡಿಗ ಚಿಂತನ - ಮಂಥನ ಸಭೆ:

ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನ ಶಕ್ತಿ ಅಗತ್ಯ : ಸತೀಶ್ ಗುತ್ತೇದಾರ್

ಬೆಂಗಳೂರು : ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಒಗ್ಗಟ್ಟಿನ ಬಲ ಪ್ರದರ್ಶನದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಮತ್ತು ಸಮಾಜಕ್ಕೆ ಶಕ್ತಿ ಬರುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಆರ್ಯ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಹೇಳಿದರು. 

   ಬೆಂಗಳೂರಿನ ಗಾರ್ಡೇನಿಯ ಅರಮನೆ ಮೈದಾನದಲ್ಲಿ ಮಾರ್ಚ್ 8 ರಂದು ನಡೆದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಚಿಂತನ - ಮಂಥನ ಸಭೆಯಲ್ಲಿ ಮಾತನಾಡುತ್ತ ರಾಜ್ಯದಲ್ಲಿರುವ ಈಡಿಗರು ಬಿಲ್ಲವರು ನಾಮಧಾರಿಗಳು ಸೇರಿದಂತೆ ಎಲ್ಲರೂ ಒಂದೇ ಎಂದು ತಿಳಿದು ಸಂಘಟಿತರಾಗಿ ಬಿ.ಕೆ ಹರಿಪ್ರಸಾದ್ ಅವರಂತಹ ನಾಯಕರ ನೇತೃತ್ವದಲ್ಲಿ ಒಗ್ಗೂಡಿ ಅವರ ನಿರ್ದೇಶನದಂತೆ ಮುನ್ನಡೆಯಬೇಕಾಗಿದೆ. ಎಲ್ಲರೂ ಒಂದೇ ಮನಸ್ಸಿನಿಂದ ಸಮುದಾಯದ ಜನರ ಕಲ್ಯಾಣಕ್ಕಾಗಿ ಸ್ಪಂದಿಸುವ ಕಾಲ ಸನ್ನಿಹಿತವಾಗಿದೆ. ಗುಂಪು, ಪಂಗಡಗಳನ್ನು ಕಟ್ಟಿಕೊಂಡರೆ ಸಮುದಾಯದ ಅಭಿವೃದ್ಧಿ ಖಂಡಿತ ಅಸಾಧ್ಯ. ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಿಂದ ರಾಜಕೀಯ ನೇತಾರರ ಒಗ್ಗೂಡುವಿಕೆಯಿಂದ ರಾಜ್ಯದ ಅತ್ಯಂತ ಹಿಂದುಳಿದ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಸಮಗ್ರ ಬೆಳವಣಿಗೆಗೆ ಚಿಂತನೆ ನಡೆಸುವ ಇಂತಹ ಸಭೆ ಅತ್ಯಂತ ಪ್ರಶಂಸನೀಯವಾದುದು. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಚಿಂತನ - ಮಂಥನ ಸಭೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ಈ ರೀತಿಯ ಸಭೆಗಳನ್ನು ನಡೆಸಿ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಿಗೆ ಶ್ರಮಿಸೋಣ. ಡಾ. ಪ್ರಣವಾನಂದ ಶ್ರೀಗಳ ನೇತೃತ್ವದ ಪಾದಯಾತ್ರೆ ಮತ್ತು ಹೋರಾಟಗಳಿಂದ ಸರಕಾರ ಕಣ್ಣು ತೆರೆಸಿ ನಿಗಮವನ್ನು ಘೋಷಣೆ ಮಾಡಿದ್ದರೂ ಅನುದಾನದ ಬಿಡುಗಡೆ ಇಲ್ಲದೆ ಸೊರಗುವಂತಾಗಿದೆ. ಈ ಬಗ್ಗೆ ಬಿ. ಕೆ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ತಕ್ಷಣ ನಿಗಮಕ್ಕೆ ಅನುದಾನ ಹಾಗೂ ಸಮುದಾಯದ ಇತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಕೋರಿ ಮುಖ್ಯಮಂತ್ರಿಗಳನ್ನು ಭೇಟಿ ಯಾಗುವುದು ಅತ್ಯಂತ ಅಗತ್ಯದ ಕೆಲಸ ಎಂದು ಹೇಳಿದರು. 

   ಕಾರ್ಯಕ್ರಮದಲ್ಲಿ ಚಿತಾಪುರದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೇಟದ ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಸೋಲೂರು ಆಯಾಮಠದ ಪೂಜ್ಯಶ್ರೀ ವಿಖ್ಯಾತಾನಂದ ಶ್ರೀಗಳು ವಿಧಾನಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಶಾಸಕರಾದ ಸುನಿಲ್ ಕುಮಾರ್ ಕಾರ್ಕಳ, ತೆಲಂಗಾಣದ ಮಾಜಿ ಸಚಿವರಾದ ಶ್ರೀನಿವಾಸ ಗೌಡ್, ಸಿನಿಮಾ ನಿರ್ದೇಶಕರಾದ ಎಸ್. ಎ ಚಿನ್ನೇ ಗೌಡ, ಚಿಕ್ಕಬಳ್ಳಾಪುರ ಡಿ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಚೇರ್ ಮ್ಯಾನ್ ಜಿ ಎಚ್ ನಾಗರಾಜ್, ಕೊರಟಗೆರೆ ಮಾಧು ಸ್ವಾಮಿ, ಗುತ್ತಿಗೆದಾರ ಬಸವರಾಜ್ ಈಳಿಗೇರ್ ವಿಜಯಪುರ ಮಾಜಿ ಶಾಸಕರಾದ ಶ್ರೀನಾಥ್ ಧಣಿ, ಗಂಗಾವತಿ ಸೂಕ್ತ ಮಾರ್ಗದರ್ಶನ ನೀಡಿ ಸಮುದಾಯದಉತ್ತಮ ಭವಿಷ್ಯ ನಿರ್ಮಾಣದ ರೂಪುರೇಷೆ ನೀಡಿದರು. ಜೆಡಿಎಸ್ ನ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಂಕರ ಪೂಜಾರಿ,ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರತಿಭಾ ಕುಳಾಯಿ, ಆರ್ಯ ಈಡಿಗ ಸಮಾಜದ ಮುಖಂಡರಾದ ವೆಂಕಟೇಶ ಗುಂಡಾನೂರು ಚಿಂತನ - ಮಂಥನ ಸಭೆಯ ಸಂಚಾಲಕರಾದ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ. ಲಕ್ಷ್ಮೀನರಸಿಂಹಯ್ಯ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.

5 ಲಕ್ಷ ಜನರ ಸಮಾವೇಶ

ದಕ್ಷಿಣ ಭಾರತದಲ್ಲಿರುವ ಸಮುದಾಯದ 26 ಪಂಗಡಗಳ ಸುಮಾರು ಐದು ಲಕ್ಷ ಜನರನ್ನು ಸೇರಿಸಿ ನಾಗಪುರ, ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಜೊತೆಗೆ ಈಡಿಗ ನಿಗಮಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರದಲ್ಲಿ ಭೇಟಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ತಿಳಿಸಿದರು