ಬೋಡೆ ರಿಯಾಜ್ ಅಹ್ಮದ್ ರವರು ನಿವೃತ್ತಿ ಪ್ರಯುಕ್ತ ಗೌರವದ ಮಹಾಪೂರ
ಕಲಬುರಗಿ ಬಹುಭಾಷಾ ಪಂಡಿತರು, ಅನುವಾದಕರು, ವಿಚಾರವಾದಿಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳ ಮೇಲೆ ಗಟ್ಟಿಯಾಗಿ ಇತಿಹಾಸ ಸಂಶೋಧನೆ ಕೈಗೊಂಡ; ಕೈಗೊಳ್ಳುತ್ತಿರುವ ಬೋಡೆ ರಿಯಾಜ್ ಅಹ್ಮದ್ ಸರ್ ಅವರು ಇಂದು ವೃತ್ತಿಯಿಂದ ನಿವೃತ್ತರಾದರು.
ಅವರು ವೃತ್ತಿಯಿಂದ ಆರ್.ಟಿ.ಓ ಅಧಿಕಾರಿಗಳಾಗಿದ್ದರು ಪ್ರವೃತ್ತಿಯಿಂದ ಗಂಭೀರ ಓದುಗರು; ಸಂಶೋಧಕರು. ಅಷ್ಟೇ ಗಂಭೀರ ಬರಹಗಾರರು. ದಿವಂಗತ ಎಂ.ಎಂ.ಕಲಬುರಗಿಯವರ ನೈತೃತ್ವದ 'ಆದಿಲ್ ಶಾಹಿಗಳ ಸಾಹಿತ್ಯ ಸಂಪುಟ'ಗಳ ಅನುವಾದದಲ್ಲಿ ಬೋಡೆಯವರು ನಮ್ಮ ಗೋಗಿಯ ಕವಿ ಬರೆದ "ಮನ್ ಲಗನ್" ಪುಸ್ತಕವನ್ನು ಅದ್ಭುತವಾಗಿ ೯ನೇ ಸಂಪುಟವಾಗಿ ಕನ್ನಡಕ್ಕೆ ತಂದಿದ್ದಾರೆ. ಅದು ಅನುವಾದ ಎಂಬುದು ಎಷ್ಟೋ ಸಹಜವೋ, ಅನುವಾದ ಕ್ಷೇತ್ರ ಪ್ರವೇಶ ಮಾಡಬಯಸುವ ಮನಸ್ಸುಗಳಿಗೆ ಹಿಡಿದ ಕೈಗನ್ನಡಿಯು ಆಗಿದೆ ಎಂಬುದು ಅಷ್ಟೇ ಸತ್ಯ.
ಇವರದೇ 'ಪ್ರೇಮ ಸೂಫಿ ಬಂದೇ ನವಾಜ್' ಹಾಗೂ ಉರ್ದು ನಾಟಕ 'ಇಂದ್ರಸಭಾ'ವನ್ನು ಕನ್ನಡಕ್ಕೆ ಮಾಡಿದ ಅನುವಾದದ ಪುಸ್ತಕವನ್ನು ವಿಶೇಷವಾಗಿ ನಾವು ಓದಬೇಕಿದೆ.
ಇಷ್ಟು ದಿನ ಇತಿಹಾಸದ ಓದು - ಬರವಣಿಗೆಗೆ ಕರ್ತವ್ಯದ ನೆಪ ಹೇಳುತ್ತಿದ್ದ ಬೋಡೆ ಸರ್ ಅವರು ಈಗ ನಿವೃತ್ತರಾಗಿದ್ದು, ಕಲ್ಯಾಣ ಕರ್ನಾಟಕದ ಇತಿಹಾಸ ಕ್ಷೇತ್ರ ಹೊಸ ಆಶಾಕಿರಣದೊಂದಿಗೆ ಅವರ ಕೆಲಸಗಳನ್ನು ನಿರೀಕ್ಷಿಸಲಿದೆ.
ಇಂದು ಅವರನ್ನು ಸಾಂದರ್ಭಿಕವಾಗಿ ಅಭಿನಂದಿಸುವುದರೊಂದಿಗೆ ಇನ್ನುಮೇಲೆ ನೆಪ ಹೇಳುವಂತಿಲ್ಲ ಎಂದು ತಮ್ಮೆಲ್ಲರ ಪರವಾಗಿ ಎಚ್ಚರಿಸಿ ಬಂದಿರುವೆ. ನಗುತ್ತಲೇ ಅದನ್ನವರು ಸ್ವೀಕರಿಸಿದರು.
ಡಾ.ವೀರಶೇಟ್ಟಿ ಗಾರಂಪಳ್ಳಿ
ನಿರ್ದೇಶಕರು , ಕ.ಪ,ಇ,