ಕನ್ನಡ ಸಾಹಿತ್ಯಕ್ಕೆ ಗೋರುಚ ಕೊಡುಗೆ ಅನುಪಮ: ಡಾ.ಸಿದ್ಧತೋಟೇಂದ್ರ ಶ್ರೀ
ಕನ್ನಡ ಸಾಹಿತ್ಯಕ್ಕೆ ಗೋರುಚ ಕೊಡುಗೆ ಅನುಪಮ: ಡಾ.ಸಿದ್ಧತೋಟೇಂದ್ರ ಶ್ರೀ
ಹಿರಿಯ ಜಾನಪದ ವಿದ್ವಾಂಸರಾಗಿ,ಶರಣ ಸಾಹಿತ್ಯ ಪ್ರಸಾರಕರಾಗಿ,ಶ್ರೇಷ್ಠ ಸಾಹಿತಿಗಳಾಗಿ ಗೋರುಚ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು ಎಂದು ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.
ಇದೇ ತಿಂಗಳು ಮಂಡ್ಯ ದಲ್ಲಿ ಜರುಗಲಿರುವ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾಗಿರುವ ಪ್ರಯುಕ್ತ ಶ್ರೀಮಠದ ದರ್ಶನಾಶೀರ್ವಾದ ಪಡೆಯಲು ಆಗಮಿಸಿದ್ದ ನಾಡೋಜ ಡಾ.ಗೋರುಚ ಅವರನ್ನು ಶ್ರೀಮಠದ ವತಿಯಿಂದ ಆತ್ಮೀಯವಾಗಿ ಸತ್ಕರಿಸಿ ಅವರು ಆಶೀರ್ವಚನ ನೀಡಿದರು.
ಜಾನಪದ ಅಕಾಡೆಮಿ,ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಗೋರುಚ ಸಮರ್ಥವಾಗಿ ಕಾರ್ಯನಿರ್ವಹಿಸಿ,ತಮ್ಮ ಸ್ಥಾನಗಳಿಗೆ ಗೌರವ ತಂದವರು. ಜಾನಪದ ಸಾಹಿತ್ಯ ಮತ್ತು ಶರಣ ಸಾಹಿತ್ಯದ ಪ್ರಸಾರಕ್ಕಾಗಿ ಅವರು ತಮ್ಮ ಬದುಕನ್ನೇ ಸವೆಸಿದವರು.
ಕರ್ನಾಟಕ ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂದು ಕನಸು ಕಂಡು,ಅದರ ಸ್ಥಾಪನೆಯಾಗುವವರೆಗೆ ನಿರಂತರ ಪರಿಶ್ರಮ ಹಾಕಿ ದುಡಿದವರು ಗೋರುಚ ಅವರು ಎಂದರು.
ಗೋರುಚ ಅವರಿಗೂ ನಾಲವಾರ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 1985 ರಲ್ಲಿ ಪ್ರಪ್ರಥಮವಾಗಿ ನಾಲವಾರ ಶ್ರೀಮಠದ ವತಿಯಿಂದ ಪ್ರಾರಂಭಿಸಲಾದ ಮಾಸಿಕ ಶಿವಾನುಭವ ಚಿಂತನ ಕಾರ್ಯಕ್ರಮದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ,ಸಿದ್ಧಪ್ರಭೆ ಎನ್ನುವ ಸ್ಮರಣಸಂಚಿಕೆಯನ್ನು ಅವರು ಲೋಕಾರ್ಪಣೆ ಗೊಳಿಸಿದ್ದು ಮಾತ್ರವಲ್ಲದೇ,
ನಂತರ ಶಿವಾನುಭವ ಶತಮಾಸೋತ್ಸವ ಸವಿನೆನಪಿಗಾಗಿ ಹೊರತಂದ ಶಿವಾನುಭವ ಸೌರಭ ಸ್ಮರಣಸಂಚಿಕೆಯನ್ನು ಅವರ ಸಂಪಾದಕತ್ವದಲ್ಲಿಯೇ ಹೊರತಂದು,ಶ್ರೀಮಠದ ಜಾತ್ರಾ ಮಹೋತ್ಸವದ ಅತಿಥಿಗಳಾಗಿದ್ದ ಅಂದಿನ ದೇಶದ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರಿಂದ ಲೋಕಾರ್ಪಣೆ ಮಾಡಿದ್ದ ನೆನಪು ಹಸಿರಾಗಿದೆ ಎಂದರು.
ನಾಲವಾರ ಶ್ರೀಮಠದ ವತಿಯಿಂದ ನೀಡಲ್ಪಡುವ "ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ" ಗೆ ಭಾಜನರಾಗಿರುವ ಗೋರುಚ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀಮಠದ ಸತ್ಕಾರ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ.ಗೋರುಚ ಅವರು ನಾಲವಾರದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ,ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು, ಶರಣ ತತ್ವದ ತಳಹದಿಯ ಮೇಲೆ ಕೋರಿಸಿದ್ಧೇಶ್ವರ ಮಠವನ್ನು ಮುನ್ನಡೆಸುತ್ತಿದ್ದಾರೆ. ನೊಂದವರ ಬಗ್ಗೆ ಅನುಕಂಪ ಮಾತ್ರ ತೋರದೇ,ಅವರನ್ನು ಮೇಲಕ್ಕೆತ್ತುವ ಕಾರ್ಯ ನಾಲವಾರ ಮಠದಿಂದ ನಡೆಯುತ್ತಿದೆ ಎಂದರು.
ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಅತ್ಯುತ್ತಮ ಸಾಹಿತಿಗಳಾಗಿದ್ದು ಅವರು ಬರೆದ ಹಲವು ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆಯುವ ,ಶ್ರೀಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುವ,ಮಠದ ಅನೇಕ ಸ್ಮರಣ ಸಂಪುಟಗಳ ಸಂಪಾದಕನಾಗುವ ಸದಾವಕಾಶ ನನಗೆ ದೊರೆತಿದೆ.
ಆಧುನಿಕ ವಚನಕಾರರಾಗಿ,ಕವಿಗಳಾಗಿ,ಅಂಕಣಕಾರರಾಗಿ ನಾಲವಾರದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ನಾಡಿನ ಸಾಹಿತ್ಯ ಲೋಕದ ಗಮನಸೆಳೆದಿದ್ದಾರೆ ಎಂದರು.
ಗುರುಗಳ ಆಶೀರ್ವಾದದಿಂದ ಮುಂಬರುವ ಮಂಡ್ಯದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಕನ್ನಡಿಗರ ಆಶಯಗಳನ್ನು ಸಮರ್ಥವಾಗಿ ಪ್ರತಿಪಾದಿಸುವುದಕ್ಕೆ ಮತ್ತಷ್ಟು ಹುರುಪು ಬಂದಿದೆ ಎಂದರು.