ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಕರ್ನಾಟಕದ ಪಂಚ ಗ್ಯಾರಂಟಿಗಳನ್ನು ಅನಕರಿಸಿದ ಪ್ರತಿಪಕ್ಷ ಅಘಾಡಿ (ಎಂವಿಎ) ಒಕ್ಕೂಟ.
ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಬೇಕೆಂಬ ಉದ್ದೇಶದಿಂದ ಪ್ರತಿಪಕ್ಷವಾದ ಮಹಾರಾಷ್ಟ್ರ ವಿಕಾಸ ಅಘಾಡಿಯು ಕರ್ನಾಟಕ ಸರ್ಕಾರದ ಮಾದರಿಯಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಪ್ರತಿಪಕ್ಷಗಳ ಒಕ್ಕೂಟ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಕೂಡ (ನ.7) ರಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಬಿಕೆಸಿಯಲ್ಲಿ ನಡೆದ ಮಹಾರಾಷ್ಟ್ರ ವಿಕಾಸ ಅಘಾಡಿ(ಎಂವಿಎ) ಸಮಾವೇಶದಲ್ಲಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಿಳೆಯರಿಗೆ ಮಾಸಿಕ 3 ಸಾವಿರ ರೂ. ಧನ ಸಹಾಯ, ‘ಮಹಾಲಕ್ಷಿ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಎಂವಿಎ ಅಧಿಕಾರಕ್ಕೆ ಬಂದರೆ ನೀಡಲಿದೆ ಎಂದು ಭರವಸೆ ನೀಡಿದರು.
ಹಾಗೆಯೇ ಉಚಿತ ಔಷಧಿಯೊಂದಿಗೆ 25 ಲಕ್ಷದ ರೂಪಾಯಿ ಉಚಿತ ಕುಟುಂಬ ವಿಮಾ ಯೋಜನೆ, ರೂ. 3 ಲಕ್ಷದವರೆಗಿನ ರೈತರ ಸಾಲ ಮನ್ನಾ ಜೊತೆಗೆ ಸಾಲ ಮರುಪಾವತಿ ಮಾಡದವರಿಗೆ ರೂ. 50,000 ಪ್ರೋತ್ಸಾಹ ಧನ, ಜಾತಿಗಣತಿ ನಡೆಸುವುದು, ಮೀಸಲಾತಿ ಮೇಲಿನ 50 ಶೇ. ಮಿತಿ ತೆಗೆದು ಹಾಕುವುದು, ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಮಾಸಿಕ 4 ಸಾವಿರ ರೂ. ಧನ ಸಹಾಯ ನೀಡುವುದು ಸೇರಿದಂತೆ ಇನ್ನೂ ಅನೇಕ ಭರವೆಸಗಳನ್ನು ಎಂವಿಎ ಜನರಿಗೆ ನೀಡಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ ನಾಯಕರು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಸರ್ಕಾರವು ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು. ಮಹಾಯುತಿ ಸರ್ಕಾರವನ್ನು ಬಿಜೆಪಿಯು ಏಕನಾಥ್ ಶಿಂಧೆಯವರ ಜೊತೆಗೂಡಿ ರಹಸ್ಯವಾಗಿ ಮತ್ತು ಅಕ್ರಮವಾಗಿ ರಚಿಸಿದೆ ಎಂದು ಆರೋಪಿಸಿದ್ದಾರೆ.
ಸಂವಿಧಾನವನ್ನು ಆದಷ್ಟು ಬೇಗ ತೆಗೆದು ಹಾಕಲು ಎನ್‌ಡಿಎ ಮತ್ತು ಆರ್‌ಎಸ್‌ಎಸ್ ಸಿದ್ದತೆ ನಡೆಸುತ್ತಿದೆ. ಹಾಗಾಗಿ, ಸಂವಿಧಾನ ರಕ್ಷಣೆಗೆ ರಾಷ್ಟ್ರವ್ಯಾಪಿ ಚಳವಳಿಯ ಅಗತ್ಯವಿದೆ ಎಂದು ಎಂವಿಎ ನಾಯಕರು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರು ಯುವಕರಿಗೆ ಆರ್ಥಿಕ ನೆರವು ನೀಡುವ ಕುರಿತು ಸುದೀರ್ಘವಾಗಿ ಮಾತನಾಡಿದರು. ಧಾರಾವಿ ಯೋಜನೆ ಸೇರಿದಂತೆ ಅದಾನಿ ಜೊತೆಗಿನ ಎಲ್ಲಾ ಟೆಂಡರ್‌ಗಳನ್ನು ರದ್ದುಗೊಳಿಸುತ್ತೇವೆ ಎಂದು ಪುನರುಚ್ಚರಿಸಿದರು. ಶರದ್ ಪವಾರ್ ಸಾಲ ಮನ್ನಾ ಯೋಜನೆ ಕುರಿತು ಸುದೀರ್ಘವಾಗಿ ಮಾತನಾಡಿದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೆರುತ್ತಿದ್ದು, ಉಭಯ ಮೈತ್ರಿಕೂಟಗಳು ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದೂ,ಯಾವ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.