"ಪಂಚ ಪಂತ್ರ" ಕಥೆ ಹೇಳುವ ವಿಶೇಷ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

"ಪಂಚ ಪಂತ್ರ" ಕಥೆ ಹೇಳುವ ವಿಶೇಷ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ
ಅಖಿಲಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಮಹಾನಗರವತಿಯಿಂದ 20ನೇ ತಾರೀಖಿನಂದು ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ ಬಹುಮಾನ ವಿತರಣೆಯ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಭು ಅಕಾಡೆಮಿಯ ಸಂಸ್ಥಾಪಕಿ ಮತ್ತು ವಾಗ್ಮಿ, ಸಂಸ್ಕೃತ ಹಾಗೂ ಭಾರತೀಯ ಸಂಸ್ಕೃತಿಯ ಪ್ರತಿಪಾದಕಿ ಡಾ. ಆರತಿ ವಿ.ಬಿ ಮತ್ತು ಜಸ್ಟ್ ಬುಕ್ ಮಾಲಿಕರು ಹಾಗೂ ಉದ್ಯಮಿಗಳು ಮತ್ತು start up ಫಂಡಿಂಗ್ ವಿಶೇಷಜ್ಞರು ಆದ ಶ್ರೀ ಸುರೇಶ ನರಸಿಂಹರವರು ಆಗಮಿಸಿದ್ದರು . ಸ್ಪರ್ಧೆಯಲ್ಲಿ ನಿರ್ಣಾಯಕರೂ ಆಗಿದ್ದ ಅಭಾಸಾಪ ಬೆಂಗಳೂರು ಗ್ರಾಮಾಂತರದ ಅಧ್ಯಕ್ಷರಾದ ಎಂ.ಡಿ ಘನಶ್ಯಾಮ್ ರವರು, ಬೆಂಗಳೂರು ದಕ್ಷಿಣ ವಲಯ ಅಧಕ್ಷರಾದ ಡಾ. ಎ ಭಾನುರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಗರದ ಎನ್ ಆರ್ ಕಾಲೋನಿಯ ಸಿ.ಅಶ್ವತ್ಥ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಜಾನೆ ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕುಮಾರಿ ಬಿ. ಭಾವನಾರವರು ಪ್ರಾರ್ಥನೆಯನ್ನು ಮಾಡಿದರು. ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ನವೀನ್ ಭಟ್ಟ ಗಂಗೋತ್ರಿಯವರು ಅತಿಥಿಗಳ ಸ್ವಾಗತವನ್ನು ಮಾಡಿ ಅವರ ಪರಿಚಯವನ್ನು ಮಾಡಿಕೊಟ್ಟರು. ಮುಖ್ಯ ಅತಿಥಿಗಳಾದ ಡಾ. ಆರತಿಯವರು ಭಾರತೀಯ ಸಂಸ್ಕೃತಿ ಮತ್ತು ವಿದ್ಯಾಭ್ಯಾಸದ ಬಗೆಗೆ ಬೆಳಕು ಚೆಲ್ಲುತ್ತಾ ನಾವು ಸದೃಢರಾಗಬೇಕು. ನಮ್ಮನ್ನು ನಾವು ಜೊತೆಗೆ ದೇಶದ ರಕ್ಷಣೆ ಮಾಡುವ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು ಎಂದು ಹೇಳುತ್ತಾ ಮೊದಲು ಬೆಂಗಳೂರಿನಲ್ಲಿ 127 ಗರಡಿಮನೆಗಳಿದ್ದವು, ಸಿನೆಮಾ ಪ್ರಭಾವದಿಂದ ಗರಡಿಮನೆಗಳು ರೌಡಿಗಳ ಆವಾಸ ಎಂದು ತೋರಿಸಿ ಜನರು ಗರಡಿ ಮನೆಗೆ ಹೋಗಿ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳದಂತೆ ಸಮಾಜದಲ್ಲಿ ಜನರ ಅಭಿಪ್ರಾಯವನ್ನು ಬದಲಸಿದ್ದಾರೆ ಎಂದು ಹೇಳಿದರು. ಪಂಚತಂತ್ರಗಳ ಬಗೆಗೆ ಮಾತನಾಡುತ್ತಾ ವೇದ ಪುರಾಣಗಳು ಕಥೆಗಳು ಉಪಕಥೆಗಳಿಂದ ನಮಗೆ ಜ್ಞಾನ ಸಂಪಾದನೆ ಹೇಗೆ ಆಗುತ್ತದೆ. ಎಂದು ಹೇಳುತ್ತಾ ಹೇಗೆ ಪಂಚತಂತ್ರ ಕಥೆಗಳ ಮೂಲಕ ಮಂದಬುದ್ಧಿಗಳಾದ ರಾಜಕುಮಾರರನ್ನು ರಾಜ್ಯಭಾರ ಮಾಡುವಷ್ಟು ತಿಳಿವಳಿಕೆಯನ್ನು ವಿಷ್ಣು ಶರ್ಮರು ನೀಡಿದರು, ಎಂದು ಹೇಳಿದರು. ಸ್ವಂತ ವಿಚಾರ ಮಾಡುವ ಗುಣವನ್ನು ಬೆಳೆಸಿಕೊಳ್ಳುವುದರ ಮೂಲಕ ಪಂಚತಂತ್ರದ ಐದು ಪ್ರಕಾರದ ಕತೆಗಳ ಪ್ರಯೋಜನ ಹಾಗೂ ಆ ತತ್ವಗಳನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವ ರೀತಿಯಲ್ಲಿ ಕಥೆಗಳಲ್ಲಿ ಸಮಸ್ಯೆ ಮತ್ತು ಪರಿಹಾರಗಳನ್ನು ಕಂಡು ಕೊಳ್ಳುವ ಮಾರ್ಗವನ್ನು ತಿಳಿಸಿದ್ದಾರೆ. ನಾವು ಯಾವ ರೀತಿಯಲ್ಲಿ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ ಪ್ರಪಂಚದಲ್ಲಿ ಇರಬೇಕು. ಸಮಷ್ಠಿಹಿತಕ್ಕಾಗಿ ಸ್ವಾರ್ಥದ ತ್ಯಾಗ ಮಾಡಬೇಕು, ಯಾವುದೇ ಶ್ಲೋಕ ಅಥವಾ ಕಥೆಯ ಸಂಪೂರ್ಣ ಹಿನ್ನೆಲೆ ಮತ್ತು ಉದ್ದೇಶ ತಿಳಿದು ಅದರ ಒಳ್ಳೆಯ ಸಂದೇಶ ಮಾತ್ರ ಸ್ವೀಕರಿಸಬೇಕೆಂದು ಹೇಳಿದರು.
ಅಭಾಸಾಪ ಬೆಂಗಳೂರು ನಗರ ಸಂಯೋಜಕರಾದ ಶ್ರೀ ಚಂದ್ರಶೇಖರ್‌ರವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹುಟ್ಟು ಅದರ ಉದ್ದೇಶ ಕರ್ನಾಟಕದಲ್ಲಿ 2014ರಿಂದ ಅಭಾಸಾಪ ನಡೆಸಿಕೊಂಡು ಬಂದಿರುವ ಕಾರ್ಯಗಳು ಇವುಗಳ ಬಗೆಗೆ ಸಂಪೂರ್ಣ ವಿವರ ನೀಡಿದರು. ಅಭಾಸಾಪ ರಾಜ್ಯ ಖಜಾಂಚಿಗಳು ಮತ್ತು ನಿರ್ಣಾಯಕ ಮಂಡಳಿಯಲ್ಲಿ ಒಬ್ಬರಾದ ಭ.ರಾ.ವಿಜಯಕುಮಾರ್‌ರವರು ಪಂಚತಂತ್ರ ಕಥೆ ಹೇಳುವ ಸ್ಪರ್ಧೆ ಅದರ ಆಯೋಜನೆಯ ಸಂಪೂರ್ಣ ವಿವರಗಳೊಂದಿಗೆ ಕಥೆಗಳನ್ನು ಕೇಳಿ ಅದರ ಫಲಿತಾಂಶವನ್ನು ನೀಡಿದರು ಎಂಬುದರ ವಿವರಣೆಯನ್ನು ಮತ್ತು ನಿರ್ಣಾಯಕರ ಅನುಭವಗಳನ್ನು ಹಂಚಿಕೊಂಡರು. ಈ ಸ್ಪರ್ಧೆಯಲ್ಲಿ ಒಟ್ಟು 500ಕ್ಕೂ ಹೆಚ್ಚು ಕಥೆಗಳು ಬಂದಿದ್ದು 474 ಕಥೆಗಳು ಅರ್ಹವಾಗಿದ್ದು ಅಂತಿಮ ಸುತ್ತಿನಲ್ಲಿ ಆಯ್ಕೆಗೊಂಡ 74 ಕಥೆಗಳಲ್ಲಿ 15 ಜನರಿಗೆ ಬಹುಮಾನಗಳನ್ನು ಹೇಗೆ ಕೊಡಲಾಗಿದೆ ಎಂಬುದನ್ನು ತಿಳಿಸಿದರು. ಬೆಂಗಳೂರು ಮಹಾನಗರ ಅಭಾಸಾಪದ ಎಲ್ಲ ಪ್ರಕಾರಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಮತ್ತೊಬ್ಬ ಅತಿಥಿಗಳಾದ ಜಸ್ಟ್ ಬುಕ್ಸ್‌ನ ಮಾಲಿಕರು ಮತ್ತು ಉದ್ಯಮಿಗಳಾದ ಶ್ರೀ ಸುರೇಶ ನರಸಿಂಹರವರು ಮಾತನಾಡಿ ಮಕ್ಕಳಲ್ಲಿ ಅಧ್ಯಯನ ಶೀಲತೆ ಪ್ರಯತ್ನ ಇದ್ದರೆ ಅವರು ಉದ್ಯಮಿಗಳಾಗಲು ಸುಲಭ ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದ ಓದುವ ಹವ್ಯಾಸವನ್ನು ಬೆಳಸಬೇಕು. ತಂದೆತಾಯಿಯರು ಕೇವಲ ಅಂಕದ ಹಿಂದೆ ಬೀಳುವಂತೆ ಒತ್ತಡ ಹೇರದೇ ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು , ನಿಸ್ವಾರ್ಥ ಮನೋಭಾವನೆಯಿಂದ ಕೆಲಸ ಮಾಡುವ ಅಭ್ಯಾಸವನ್ನು ಬೆಳಸಿ ಪ್ರೋತ್ಸಾಹಿಸಬೇಕು. ಪಂಚತಂತ್ರದ ನೀತಿ ಕಥೆಗಳನ್ನು ಮಕ್ಕಳಿಗಿಂತ ಮೊದಲು ತಂದೆ ತಾಯಿಯರು ಅನುಸರಿಸಬೇಕು ಎಂದು ಹೇಳಿದರು. ಇತ್ತೀಚಿಗೆ ಮೋಬೈಲ್ ಬಳಕೆ ಹಿರಿಯರೇ ಹೆಚ್ಚು ಮಾಡುತ್ತಿರುವುದರಿಂದ ಮಕ್ಕಳನ್ನು ಅನುಕರಿಸುತ್ತಾರೆ ಹೀಗಾಗಿ ಹಿರಿಯರೇ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ಹೇಳಿದರು. ಕಥೆ ಹೇಳುವ ಕೌಶಲ್ಯ ಅವರ ವೃತ್ತಿ ಜೀವನದಲ್ಲಿ ಸಂಪರ್ಕ ಕಲೆಗೆ ಬಹಳ ಉತ್ತಮವಾದುದಾಗಿದೆ. ವಿದೇಶಗಳಲ್ಲಿ ಹೇಗೆ ಕಥೆ ಹೇಳುವ ಕೌಶಲ್ಯವು ವ್ಯಾಪಕವಾಗಿದೆ ಎಂಧು ಕೂಡ ಹೇಳಿ ಅಭಾಸಾಪದ ಈ ಸ್ಪರ್ಧೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಭಾಸಾಪ ಸದಸ್ಯರಾದ ಸಚಿನ್ ಮುಂಗಿಲರವರು ಮಾಡಿದರು.
ಕೊನೆಯಲ್ಲಿ ವಂದನಾರ್ಪಣೆಯನ್ನು ಮಾಡಿದ ಅಭಾಸಾಪ ಬೆಂಗಳೂರು ಜಿಲ್ಲೆಯ ಕಾರ್ಯದರ್ಶಿಗಳಾದ ರಮೇಶ ದೊಡ್ಡಪುರರವರು ಸ್ಪರ್ಥೆಯ ಆಯೋಜನೆಯಲ್ಲಿ ಶ್ರಮವಹಿಸಿದ ಪ್ರತಿಯೊಬ್ಬರಿಗೂ , ಕಾರ್ಯಕ್ರಮಕ್ಕೆ ಸಹಾಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಿದರು. 74 ಜನ ಅಂತಿಮ ಸುತ್ತಿನ ಸ್ಪರ್ಧಿಗಳು ಅವರ ಪೋಷಕರ ಜೊತೆಗೆ ಅಭಾಸಾಪದ ಕಾರ್ಯಕರ್ತರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಮಳೆಯ ಗದ್ದಲದಲ್ಲೂ 200 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿ ಕಾಋಯಕ್ರಮ ನೆರವೇರಿತು.
ಮಾಧುರಿ ದೇಶಪಾಂಡೆ, ಬೆಂಗಳೂರು