ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ನರೇಗಾ ಆಯವ್ಯಯ ತಯಾರಿ
ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ
ನರೇಗಾ ಆಯವ್ಯಯ ತಯಾರಿ
ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಒಂದು ತಿಂಗಳ ಕಾಲ ನರೇಗಾ ಯೋಜನೆಯ 2025- 26 ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದ್ದರು.
ಈ ಅಭಿಯಾನದಡಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು. ಅದರಂತೆ ಯೋಜನೆಯಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಲವಾರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಸೌಲಭ್ಯಗಳಿವೆ. ಇದರ ಲಾಭ ಪಡೆದುಕೊಳ್ಳಲು ಜನರು ತಮ್ಮ ತಮ್ಮ ಗ್ರಾಪಂಗೆ ಸಂಪರ್ಕಿಸಬೇಕು. ಕೂಲಿಕಾರರಿಂದ ಕೂಲಿ ಬೇಡಿಕೆ ಹಾಗೂ ಸಾರ್ವಜನಿಕರಿಂದ ಕಾಮಗಾರಿ ಬೇಡಿಕೆ ಸ್ವೀಕರಿಸಲು ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ನಡೆಸಲಾಗುತ್ತದೆ. ಈ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು. ಅ.31ರೊಳಗಾಗಿ ಬೇಡಿಕೆಗಳ ಅರ್ಜಿಗಳನ್ನು ಸಂಬಂಧಪಟ್ಟ ಗ್ರಾಪಂಗೆ ಸಲ್ಲಿಸಬೇಕು ಎಂದರು.
ನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ಸಮಾನ ಕೂಲಿ ದರ 349 ರೂ. ಇದ್ದು, ಕುಟುಂಬವೊಂದಕ್ಕೆ ವರ್ಷದಲ್ಲಿ 100 ದಿನ ಕೆಲಸ ನೀಡಲಾಗುವುದು. ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಅಭಿಯಾನದ ಭಾಗವಾಗಿ ಅ.31 ರವರೆಗೆ ನರೇಗಾ ಯೋಜನೆ ಕುರಿತು ಅಭಿಯಾನದ ಜಾಗೃತಿ ವಾಹನದ ಮೂಲಕ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಪ್ರಚಾರಾಂದೋಲನ ಹಮ್ಮಿಕೊಂಡು ಮನೆ ಮನೆ ಜಾಥಾ ನಡೆಸಬೇಕು. ನರೇಗಾದ ವಿವಿಧ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಹಾಗೂ ಗ್ರಾಪಂ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ಅಂಗನವಾಡಿಯಲ್ಲಿ ಕಾಮಗಾರಿ ಬೇಡಿಕೆ ಸ್ವೀಕಾರ ಪೆಟ್ಟಿಗೆ ಇಡಬೇಕು. ಕೂಲಿಕಾರರು ವಲಸೆ ಹೋಗದೆ ಸ್ವಗ್ರಾಮದಲ್ಲೇ ನರೇಗಾದಡಿ ಕೆಲಸ ಮಾಡಬೇಕು. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ಇದೆ ಎಂದರು.
ಈ ವಿಶೇಷ ಅಭಿಯಾನದಲ್ಲಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು, ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು ಒಳಗೊಂಡಂತೆ ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. ನ.15 ರೊಳಗೆ ವಾರ್ಡ ಸಭೆ ನಡೆಸಿ ಜನರಿಂದ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ನಂತರ ನಿಯಮಾನುಸಾರ ವಾರ್ಡ ಸಭೆಗಳಲ್ಲಿ ಕಾಮಗಾರಿಗಳನ್ನು ಅನುಮೋದಿಸಿ ಗ್ರಾಮಸಭೆಗೆ ಸಲ್ಲಿಸಲಾಗುವುದು.ಹಾಗಾಗಿ ಅರ್ಹ ಫಲಾನುಭವಿಗೆ ಕೆಲಸದ ಹಾಗೂ ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಎಂದಿದ್ದಾರೆ.
_ಮುಖ್ಯಾಂಶಗಳು_
ತಾಲೂಕಿನ ಎಲ್ಲಾ ಗ್ರಾ.ಪಂ. ಗಳಲ್ಲಿ ಕಾರ್ಯಕ್ರಮ
ಕಾಮಗಾರಿ ಸ್ಥಳಗಳಲ್ಲಿ ಒದಗಿಸುವ ಸೌಲಭ್ಯಗಳ ಕುರಿತು ಮಾಹಿತಿ
ಗ್ರಾಮಸಭೆಯಲ್ಲಿ ನರೇಗಾ ಯೋಜನೆಯಡಿ ಅನುಮೋದನೆಗೊಂಡ ಎಲ್ಲ ವರ್ಗದ ಅರ್ಹ ಫಲಾನುಭವಿ/ಕುಟುಂಬವು ತನ್ನ ಜೀವಿತಾವಧಿಯಲ್ಲಿ ನರೇಗಾದಡಿ ಐದು ಲಕ್ಷ ರೂ.ಗಳವರೆಗೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು.
ಮಾಣಿಕರಾವ ಪಾಟೀಲ
ಇಒ, ತಾ.ಪಂ. ಕಮಲನಗರ