ನರೇಗಲ್ಲ ನಲ್ಲಿ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ಚಾಲನೆ
ನರೇಗಲ್ಲ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಚಾಲನೆ
ನರೇಗಲ್ಲ, ಜು. 2: ನರೇಗಲ್ಲ ಪಟ್ಟಣದ ಬಸ್ ನಿಲ್ದಾಣದ ರಸ್ತೆಬದಿಯಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಮಳಿಗೆಗಳ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ, ಮಾತನಾಡಿ, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ರೋಣದ ಮಹಾಲಕ್ಷ್ಮೀ ಕನ್‌ಸ್ಟ್ರಕ್ಷನ್ ಆಶ್ರಯದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗುವುದರಿಂದ ಪಟ್ಟಣದ ವ್ಯಾಪಾರ ವಹಿವಾಟು ಮತ್ತಷ್ಟು ವೃದ್ಧಿಯಾಗಲಿದೆ. ವ್ಯಾಪಾರಿಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ಮಳಿಗೆಗಳು ದೊರೆಯುವುದರಿಂದ ಮಳೆ, ಗಾಳಿ ಹಾಗೂ ಬಿಸಿಲಿನ ತೊಂದರೆ ಇಲ್ಲದೆ ವ್ಯಾಪಾರ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ನರೇಗಲ್ಲ ಪಟ್ಟಣ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವ್ಯಾಪಾರದ ವಿಸ್ತರಣೆ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ವ್ಯವಸ್ಥಿತ ವಾಣಿಜ್ಯ ಚಟುವಟಿಕೆಗಳಿಗೆ ಮಳಿಗೆಗಳ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 10×10 ಅಳತೆಯ 10 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಕಾಮಗಾರಿ ವೇಳೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಎಂ.ಎಸ್. ಧಡೇಸೂರಮಠ, ಹನಮಂತಪ್ಪ ಅಬ್ಬಿಗೇರಿ, ನಿಂಗನಗೌಡ ಲಕ್ಕನಗೌಡ, ಅಲ್ಲಾಬಕ್ಷಿ ನಧಾಪ್, ಸಂತೋಷ ಹನಮಸಾಗರ, ಸದ್ದಾಂ ನಶೇಖಾನ, ಶೇಖಪ್ಪ ಕೆಂಗಾರ, ಶೇಖಪ್ಪ ಜುಟ್ಲದ, ಕಳಕನಗೌಡ ಪೊಲೀಸ್ ಪಾಟೀಲ, ಮುತ್ತಪ್ಪ ನೂಲ್ಕಿ, ಈರಪ್ಪ ಮಣೋಡ್ಡರ, ಸಂಜು ದೊಡ್ಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
