ಸಗರ ಗ್ರಾ.ಪಂ.ದಿನಗೂಲಿ ನೌಕರರಿಗೆ ವೇತನ ನೀಡುವಂತೆ ಆಗ್ರಹ - ಶ್ರೀಕಾಂತಗೌಡ ಸುಬೇದಾರ ಆಗ್ರಹ
ಸಗರ ಗ್ರಾ.ಪಂ.ದಿನಗೂಲಿ ನೌಕರರಿಗೆ ವೇತನ ನೀಡುವಂತೆ ಆಗ್ರಹ - ಶ್ರೀಕಾಂತಗೌಡ ಸುಬೇದಾರ ಆಗ್ರಹ
ಶಹಾಪುರ : ತಾಲೂಕಿನ ಸಗರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಜನ ದಿನಗೂಲಿ ನೌಕರರಿಗೆ ಕೂಡಲೇ ವೇತನ ನೀಡಬೇಕೆಂದು ಗ್ರಾಮದ ಯುವ ಮುಖಂಡ ಶ್ರೀಕಾಂತಗೌಡ ಸುಬೇದಾರ ದಿಢೀರನೆ ಪ್ರತಿಭಟನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಳೆದ ತಿಂಗಳು ದಿನಗೂಲಿ ನೌಕರರ ಸಮಸ್ಯೆ ಕುರಿತು ಲಿಖಿತವಾಗಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದರು ಪ್ರಯೋಜನೆಯಾಗಿಲ್ಲ, ಈ ವಿಷಯ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಫೋನ್ ಮಾಡಿದರೂ ಕರೆ ಸ್ವೀಕರಿಸದೆ ಬೇಜವಾಬ್ದಾರಿತನ ವಹಿಸಿದ್ದಾರೆ ಇಂಥವರನ್ನು ಕೂಡಲೇ ಕಿತ್ತೆಸೆಯಬೇಕೆಂದು ಆಗ್ರಹಿಸಿದರು.
ಕಳೆದ ಒಂಬತ್ತು ತಿಂಗಳಿನಿಂದ ವೇತನ ಪಡೆಯದ ದಿನಗೂಲಿ ನೌಕರರ ಕುಟುಂಬ ನಿರ್ವಹಣೆ ಬಹಳ ಕಷ್ಟಕರವಾಗಿದ್ದು ಇದನ್ನು ಅರ್ಥ ಮಾಡಿಕೊಂಡು ಕೂಡಲೇ ವೇತನ ಪಾವತಿಸಬೇಕು,ಅಧಿಕಾರಿಗಳು ಲೂಟಿ ಮಾಡುವುದನ್ನು ನಿಲ್ಲಿಸಬೇಕು,ಗ್ರಾಮ ಅಭಿವೃದ್ಧಿ ಪಥದತ್ತ ಸಾಗಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಳೆದ ಒಂಬತ್ತು ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಖಾರವಾಗಿ ನುಡಿದರು.
