ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಕನಕದಾಸರು - ಸಿದ್ದರಾಮ ಹೊನ್ಕಲ್
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಕನಕದಾಸರು - ಸಿದ್ದರಾಮ ಹೊನ್ಕಲ್
ಯಾದಗಿರಿ: ಕನಕದಾಸರು ಈ ಜಗತ್ತಿಗೆ ನೈತಿಕ ಮೌಲ್ಯಗಳನ್ನು ಕಟ್ಟಿಕೊಡುವುದರ ಜೊತೆಗೆ ಸದಾ ಸಮಾಜ ಮುಖಿ ಚಿಂತನೆಗಳಲ್ಲಿ ತೊಡಗಿ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿದು ಜನಮಾನಸದಲ್ಲಿ ಅಜರಾಮರವಾಗಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ದರಾಮ ಹೊನ್ಕಲ್ ಹೇಳಿದರು.
ನಗರದ ಕೆ.ಎಂ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ "ಕನಕ ದರ್ಶನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದಾಸ ಸಾಹಿತ್ಯದ ಪ್ರಮುಖ ಕವಿಗಳಾಗಿ, ತತ್ವಜ್ಞಾನಿಗಳಾಗಿ,ಸಮಾಜ ಸುಧಾರಕರಾಗಿ,ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಕನಕದಾಸರು ಪ್ರಮುಖರು ಎಂದು ನುಡಿದರು.
ದಾಸ ಸಾಹಿತ್ಯದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿರುವ ಕನಕದಾಸರು ಸುಮಾರು 300 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸುವುದರ ಜೊತೆಗೆ ಉಗಾಭೋಗಗಳು ಮತ್ತು ಸುಳಾಧಿಗಳನ್ನು ಈ ನಾಡಿಗೆ ಪರಿಚಯಿಸಿ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯೂ ಜಾತ್ಯಾತೀತತೆಯ ಸಂದೇಶವನ್ನು ಸಾರುವ ವಿಶ್ವಪ್ರಸಿದ್ಧ ಸಾಲುಗಳಾಗಿವೆ ಎಂದು ಹಿರಿಯ ಸಾಹಿತಿ ಗುರುಪ್ರಸಾದ್ ವೈದ್ಯ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಮುಖ್ಯ ಅತಿಥಿಗಳು ಹಾಗೂ ಪತ್ರಕರ್ತರಾದ ಡಾ.ಎಸ್.ಎಸ್ ನಾಯಕ ಮಾತನಾಡಿ, ಸಮಾಜದಲ್ಲಿರುವ ಅಂಧ ಶ್ರದ್ಧೆ ಕಂದಾಚಾರ ಮೂಢನಂಬಿ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು,ಜನರಲ್ಲಿ ಜಾಗೃತಿ ಮೂಡಿಸಿ ವಾಸ್ತವೀಕತೆಯ ನಿಲುವುಗಳಿಗೆ ಜಾಸ್ತಿ ಹೊತ್ತು ನೀಡಿ ಸಮ ಸಮಾಜದ ಕಟ್ಟುವುದರ ಬಗ್ಗೆ ಅರಿವು ಮೂಡಿಸಿ ಮಹಾನ್ ತತ್ವಜ್ಞಾನಿ ಕನಕದಾಸರು ಎಂದು ನುಡಿದರು
ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಮುಂಡರಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ, ಕೆ.ಎಂ.ಎಂ ಕಾಲೇಜಿನ ಆಡಳಿತ ಅಧಿಕಾರಿಗಳಾದ ವೆಂಕಟೇಶ ಪೂಜಾರಿ,ಸಾಹಿತಿಗಳಾದ ಎ.ಬಿ.ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಕನಕ ದರ್ಶನ ಕಾರ್ಯಕ್ರಮದ ಆಶಯಗಳು ಕುರಿತು ಪ್ರಾಸ್ತಾವಿಕ ನುಡಿಗಳಾಡಿದರು,ಕುಮಾರಿ ನಿಂಗಮ್ಮಪ್ರಾರ್ಥಿಸಿದರು, ಗಣ್ಯರನ್ನು ಭೀಮರಾಯ ಸ್ವಾಗತಿಸಿದರು,ಪವನ ಕುಮಾರ ನಿರೂಪಿಸಿದರು,ಪವಿತ್ರ ವಂದಿಸಿದರು.
