ನಾಡೋಜ ಪ್ರಶಸ್ತಿ ಹಿಂಪಡೆಯಲು ಸರ್ಕಾರಕ್ಕೆ ಒತ್ತಾಯ ಪ್ರೊ. ಶಿವರಾಜ ಪಾಟೀಲ ಆಗ್ರಹ

ನಾಡೋಜ ಪ್ರಶಸ್ತಿ ಹಿಂಪಡೆಯಲು ಸರ್ಕಾರಕ್ಕೆ ಒತ್ತಾಯ ಪ್ರೊ. ಶಿವರಾಜ ಪಾಟೀಲ ಆಗ್ರಹ

ನಾಡೋಜ ಪ್ರಶಸ್ತಿ ಹಿಂಪಡೆಯಲು ಸರ್ಕಾರಕ್ಕೆ ಒತ್ತಾಯ ಪ್ರೊ. ಶಿವರಾಜ ಪಾಟೀಲ ಆಗ್ರಹ

ಕಲಬುರಗಿ, ಜೂನ್ 19: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿ ನೀಡಿರುವ ನಾಡೋಜ ಗೌರವ ಪದವಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಚಿಂತಕ ಪ್ರೊ. ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಮಹೇಶ್ ಜೋಶಿ ಅವರ ಆಜೀವ ಸದಸ್ಯತ್ವವನ್ನು ಪರಿಷತ್ತಿನ ಆಡಳಿತ ಮಂಡಳಿ ರದ್ದುಪಡಿಸಿರುವುದು ಗಂಭೀರ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳು ನೈತಿಕ ಹೊಣೆಗಾರಿಕೆಯನ್ನು ಪಾಲಿಸಬೇಕಾಗಿದ್ದು, ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಸಂದರ್ಭದಲ್ಲಿ ಅವರು ಸ್ವಯಂಪ್ರೇರಿತವಾಗಿ ನಾಡೋಜ ಗೌರವ ಪದವಿಯನ್ನು ಹಿಂದಿರುಗಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಡೋಜದಂತಹ ಪ್ರತಿಷ್ಠಿತ ಗೌರವಗಳು ಅರ್ಹತೆ, ಪಾರದರ್ಶಕತೆ ಹಾಗೂ ಉತ್ತಮ ಸಾರ್ವಜನಿಕ ಬದುಕಿನ ಪ್ರತೀಕವಾಗಿರಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕನ್ನಡ ವಿಶ್ವವಿದ್ಯಾಲಯವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಲ್ಲದೆ, ರಾಜ್ಯ ಸರ್ಕಾರ ಅಥವಾ ಅದರ ಅಧೀನದಲ್ಲಿರುವ ಸಂಸ್ಥೆಗಳು ಮಹೇಶ್ ಜೋಶಿ ಅವರಿಗೆ ನೀಡಿರುವ ಇತರೆ ಗೌರವ, ಪ್ರಶಸ್ತಿಗಳಿದ್ದರೆ ಅವುಗಳನ್ನೂ ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ನಾಡೋಜ ಪದವಿಯ ಘನತೆ, ಕನ್ನಡ ವಿಶ್ವವಿದ್ಯಾಲಯದ ಗೌರವ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲಿನ ಜನರ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪ್ರೊ. ಶಿವರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.