ಡೊಂಗರಗಾoವ ದರ್ಶನ
ಡೊಂಗರಗಾoವ ದರ್ಶನ
ಚಿಗ್ಗೋಣ ಮೇಷ್ಟ್ರು ಶೈಕ್ಷಣಿಕ ಕ್ಷೇತ್ರಕ್ಕೆ ಹಿರಿದಾದ ಕೊಡುಗೆ ಸಲ್ಲಿಸುವುದರ ಜೊತೆಗೆ ಕೌಟುಂಬಿಕ ಬದುಕಿನಲ್ಲಿಯೂ ಸಾಕಷ್ಟು ಬೆಳವಣಿಗೆಯನ್ನು ಕಂಡರಲ್ಲದೇ ಸರಳ ಜೀವನ, ಉನ್ನತ ವಿಚಾರ, ಶುದ್ಧ ಕಾರ್ಯದಿಂದ ನಮ್ಮ ನಡುವಿನ ಬಹುಮುಖ ವ್ಯಕ್ತಿತ್ವದ ಹಿರಿಯ ಜೀವಿಗಳಾಗಿದ್ದಾರೆ. ಅಪರಿಮಿತವಾದ ಜೀವನೋತ್ಸಾಹ, ಆತ್ಮವಿಶ್ವಾಸ, ಅಪಾರ ಕುತೂಹಲ ಮೈಗೂಡಿಸಿಕೊಂಡಿರುವ ಮೇಷ್ಟ್ರು ಗ್ರಾಮಕ್ಕೆ ಏನಾದರೊಂದು ಮಾಡಬೇಕು ಕುತೂಹಲದಿಂದ 'ಡೊಂಗರಗಾಂವ ದರ್ಶನ' ಎಂಬ ಪುಸ್ತಕ ಹೊರ ತರುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಅವರ "ಡೊಂಗರಗಾಂವ ದರ್ಶನ" ಈ ಕೃತಿ ಸುಮಾರು ಎರಡು ಶತಮಾನಗಳ ಡೊಂಗರಗಾಂವ ಗ್ರಾಮದ ಇತಿಹಾಸವನ್ನು ಹೇಳಿಕೊಡುತ್ತದೆ. ಶ್ರೀ ಸಂಗಪ್ಪ ಚಿಗೋಣ ನಿವೃತ್ತ ಶಿಕ್ಷಕರು ಗ್ರಾಮದ ಇತಿಹಾಸ ಮುಂಬರುವ ನಾಗರಿಕರಿಗೆ ತಿಳಿಯಲು ಶ್ರಮವಹಿಸಿ ಬರೆದು ಪುಸ್ತಕ ರೂಪದಲ್ಲಿ ಮುದ್ರಿಸಿ ಇಡುತ್ತಿರುವುದು ಒಂದು ಶ್ಲಾಘನೀಯ ಕೆಲಸವೆ ಆಗಿದೆ. ನಿವೃತ್ತರಾದ ಮೇಲೆಯೂ ತಮ್ಮ ಓದು, ಬರಹವನ್ನು ಹಾಗೆಯೇ ಮುಂದುವರಿಸಿಕೊಂಡು ಹೊರಟಿದ್ದಾರೆ. ಈ ಲೇಖಕರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚು. ಹೆಚ್ಚಾಗಿ ಆಧ್ಯಾತ್ಮಿಕ ಗ್ರಂಥಗಳನ್ನು ಓದುತ್ತಿರುತ್ತಾರೆ. ಆದರೆ ಈ ಕೃತಿಯಲ್ಲಿ ಆಧ್ಯಾತ್ಮಿಕ ವಿಷಯವೇನು ಇಲ್ಲ. ಡೊಂಗರಗಾಂವ ಗ್ರಾಮದ ಅಂದು-ಇಂದಿನ ಇತಿಹಾಸ ಮಾತ್ರ ಗ್ರಾಮಸ್ಥರು ಹಾಗೂ ಸುತ್ತಲಿನವರು ಓದಿ ಅರ್ಥೈಸಿಕೊಳ್ಳುವಂತೆ ಸರಳ ಭಾಷೆಯಲ್ಲಿ ಸುಂದರವಾಗಿ ಬರೆದಿದ್ದಾರೆ. ಇದೊಂದು ಗ್ರಾಮದ ಐತಿಹಾಸಿಕ ಗ್ರಂಥವೆಂದು ಮನಬಿಚ್ಚಿ ಹೇಳಲು ಹರ್ಷವಾಗುತ್ತದೆ.
ಈ ಕೃತಿಯಲ್ಲಿ ಲೇಖಕರು ಗ್ರಾಮದ ಇತಿಹಾಸವನ್ನು ನಾಲ್ಕು ಘಟ್ಟಗಳಾಗಿ ವಿಂಗಡಿಸಿದ್ದಾರೆ. ಮೊದಲನೇ ಘಟ್ಟದಲ್ಲಿ ಸ್ವಾತಂತ್ರ್ಯ ಪೂರ್ವದ ಗ್ರಾಮ ಇತಿಹಾಸವಿದೆ. ಇದನ್ನು ಅಂದಿನ ಕಾಲದಲ್ಲಿ ನಡೆದಂತೆಯೇ ಸತ್ಯ-ಸುಂದರವಾಗಿ ಚಿತ್ರಿಸಿದ್ದಾರೆ. ಊರಲ್ಲಿರುವ ಅಂದಿನ ಜನರು, ಮನೆಗಳು, ರಸ್ತೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವಾಲಯಗಳ ಪಾತ್ರ, ಭಕ್ತಿ ಭಾವದಿಂದ ಕೂಡಿದ ಜನರ ಭಾವನೆ, ದೇವರ ಮೇಲಿನ ನಂಬಿಕೆ, ಜಾತಿ ಪದ್ಧತಿ ಹೀಗೆ ಒಂದೇ, ಎರಡೇ ಅಂದಿನ ಸಮಾಜದಲ್ಲಿ ಪ್ರಚಲಿತದಲ್ಲಿರುವ ಮೂಲ ಚಿತ್ರಣವನ್ನೆ ಕೃತಿಯಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಕೆಲವು ಹಿರಿಯರ ಹೆಸರುಗಳು ಹಾಗೂ ಮನೆತನದ ಹೆಸರುಗಳು ಕೂಡಾ ಬರವಣಿಗೆಯಲ್ಲಿ ಸರಾಗವಾಗಿ ಬಂದಿವೆ, ಗ್ರಾಮದಲ್ಲಿರುವ ಅಂದಿನ ಕಸಬುದಾರರ ಸಂಪೂರ್ಣ ಮಾಹಿತಿಯೊಂದಿಗೆ ಅವರಿಗೂ ಹಾಗೂ ರೈತರಿಗೂ ಇರುವ ಸಂಬಂಧವನ್ನು ಅಂದಿನ ಕಾಲಘಟ್ಟದಲ್ಲಿ ಇದ್ದಂತೆ ಚಿತ್ರಿಸಿದ್ದಾರೆ. ರೈತರಿಗೂ ಹಾಗೂ ಕಸುಬುದಾರರಿಗೂ ಹಣದ ವ್ಯವಹಾರವೇ ಇದ್ದಿಲ್ಲ, ರೈತರು ಬೆಳೆದ ಧಾನ್ಯಗಳನ್ನು ಕಸಬುದಾರರಿಗೆ ಅವರು ಮಾಡಿದ ಕೆಲಸಕ್ಕೆ ಪರ್ಯಾಯವಾಗಿ ಸಂದಾಯ ಮಾಡುತ್ತಿದ್ದರು. ರೈತರ ಹಾಗೂ ಕಸಬುದಾರರ ಊರಲ್ಲಿರುವ ಎಲ್ಲರ ಬಾಂಧವ್ಯ ಬಹಳ ಚೆನ್ನಾಗಿತ್ತು.
ಊರಿನ ಜನರ ಮುಖ್ಯ ಉದ್ಯೋಗವಂತೂ ಒಕ್ಕಲುತನವೇ ಆಗಿತ್ತು. ಕಾಲಕಾಲಕ್ಕೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದಾದ ತೊಂದರೆಗಳನ್ನು ಲೇಖಕರು ಮಾರ್ಮಿಕವಾಗಿ ನಮೂದಿಸಿದ್ದಾರೆ. ಅಂದಿನ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಈ ಚಿಕ್ಕ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಜನರು ಆರೋಗ್ಯ ಕಾಪಾಡಿಕೊಳ್ಳಲು, ಬಂದ ರೋಗಗಳಿಗೆ ಆಯುರ್ವೇದ ಪದ್ಧತಿಗನುಗುಣವಾಗಿ ಹಳ್ಳಿಯಲ್ಲಿ ವಾಸಿಸುತ್ತಿರುವ ನಾಟಿ ವೈದ್ಯರೆ ಇವರಿಗೆ ಚಿಕಿತ್ಸೆ ಮಾಡುತ್ತಿದ್ದ ಬಗ್ಗೆ, ಔಷದಗಳು ಗಿಡ, ಮೂಲಿಕೆ, ಬೇರುಗಳೆ ಆಗಿದ್ದವೆಂದು ಅಂದಿನ ಮಾಹಿತಿಯನ್ನು ಯಥಾವತ್ತಾಗಿ ವಿವರಿಸಿದ್ದಾರೆ.
ಪೂರ್ವಕಾಲದ ಗ್ರಾಮದ ಚರಿತ್ರೆಯನ್ನು ವಿವರಿಸುತ್ತ ಲೇಖಕರು ಮುಂದುವರೆದು ಹುಣಚಿಕೆರೆ ಇರುವಲ್ಲಿ ಹಳೆಯ ಊರು ಇತ್ತೆಂದು ಈಗ ಅದರ ಕುರುಹಾಗಿ "ಭೀಮೇಶ್ವರಲಿಂಗ” ಇನ್ನು ಇರುವುದಾಗಿ ಮಾಹಿತಿ ನೀಡಿದ್ದಾರೆ. ಪೂರ್ವ ಕಾಲದ ಗ್ರಾಮ ನಿವಾಸಿಗಳು ಜೈನರು ಹಾಗೂ ರೆಡ್ಡಿ ಜನಾಂಗದವರಿದ್ದರೆಂದು ಹೇಳಿದ್ದಾರೆ. ಇಲ್ಲಿ ವಿಷಯ ಮೊಟಕುಗೊಂಡಿದೆ. ಇನ್ನು ವಿಸ್ತಾರವಾಗಿ ವಿವರಣೆ ಇರಬೇಕಾಗಿತ್ತು. ಆದರೆ ಇವರು ಲೇಖಕರು, ಸಂಶೋಧಕರಲ್ಲ, ಹೀಗಾಗಿ ವಿಷಯ ಹೆಚ್ಚಿಗೆ ವ್ಯಕ್ತವಾಗಿಲ್ಲವೆನಿಸುತ್ತದೆ. ಡೊಂಗರಗಾಂವ ಗ್ರಾಮ ಸಂಶೋಧನೆ ಆದರೆ ಸಮಗ್ರ ಇತಿಹಾಸ ತಿಳಿಯುತ್ತದೆ. ಭೀಮೇಶ್ವರ ಲಿಂಗ, ಡೊಂಗರದೇವಿ ದೇವಾಲಯ, ಅದಕ್ಕೆ ಹೊಂದಿಕೊಂಡಿರುವ ಮಲ್ಲಿಕಾರ್ಜುನ ದೇವಾಲಯ ಹಾಗೂ ಊರ ಸೀಮೆಯಲ್ಲಿ ಇರುವ ಲಿಂಗದ ಗುಡಿ ಇವು ಸಂಶೋದನೆಗೆ ಯೋಗ್ಯವಾದ ಸ್ಥಳಗಳಾಗಿವೆ. ಹೀಗೆ ಪುರಾತನ ಗುಡಿ ಗುಂಡಾರಗಳು, ಮಠಗಳು ಸಂಶೋದನೆಗೊಳಗಾದಾಗ ಗ್ರಾಮದ ಇತಿಹಾಸ ನಿಚ್ಚಳವಾಗಿ ತಿಳಿಯಬಹುದು.
ಸಾಮಾಜಿಕ ಪ್ರಗತಿ, ಆರ್ಥಿಕ ಪ್ರಗತಿ ಹೊಂದುವದರ ಜೊತೆಗೆ ಆಧ್ಯಾತ್ಮಿಕ ಪ್ರಗತಿಯೂ ಮಾನವನಿಗೆ ಅಷ್ಟೇ ಮುಖ್ಯವಾಗಿದೆ. ಇದು ನಮ್ಮ ಭಾರತದ ವೈಶಿಷ್ಟ್ಯವೆಂದು ಹೇಳಿದರೆ ತಪ್ಪಾಗದು. ಪೂರ್ವಜರು ಆಧ್ಯಾತ್ಮಿಕ ಚಿಂತನೆಯ ಕಡೆಗೆ ಹೆಚ್ಚಿನ ಒತ್ತುಕೊಟ್ಟಿದ್ದರು. ಆಧ್ಯಾತ್ಮ ಚಿಂತನೆಯಿಂದ ಮಾನವರಲ್ಲಿಯ ಮಾನವೀಯತೆ ಅಭಿವೃದ್ಧಿ ಹೊಂದುತ್ತದೆ. ಮಾನವೀಯತೆಯೇ ಮಾನವರಿಗೆ ಅತಿ ಅವಶ್ಯವಾದುದೆಂದು ಪೂರ್ವಕಾಲದಿಂದಲೂ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಹಾಗೂ ಅದರಂತೆಯೇ ನಡೆದು, ನುಡಿದು ಆದರ್ಶ ಜೀವಿಗಳಾಗಿ ಬಾಳಿದ್ದಾರೆ. ಇದು ಕಾಲಾನುಕಾಲದಿಂದ ನಡೆದು ಬಂದ ಸಾಮಾಜಿಕ ಕಾರ್ಯಗಳಲ್ಲಿ ಒಂದಾಗಿದೆ. ೧೯೬೮-೬೯ರಲ್ಲಿ ಯರಬಾಗದ ಶ್ರೀರೇವಣಸಿದ್ದಯ್ಯಸ್ವಾಮಿಗಳು ಡೊಂಗರಗಾಂವಕ್ಕೆ ಬಂದು ತಮ್ಮ ಸದ್ಭಕ್ತರ ಮನೆಗಳಿಗೆ ಹೋಗಿ ಅವರಿಗೆ ಅಧ್ಯಾತ್ಮದ ಅರಿವು ಮೂಡಿಸುವದಲ್ಲದೆ ಎಲ್ಲರಿಗೂ ಅನುಕೂಲವಾಗಲೆಂದು ಸಾರ್ವಜನಿಕವಾಗಿ ಪ್ರವಚನಗಳನ್ನು ನೆರವೇರಿಸಿ, ಪೂಜೆ, ಪುನಸ್ಕಾರಗಳ ಮಹತ್ವವನ್ನು ತಿಳಿಸುತ್ತ ಇಲ್ಲಿಯೇ ಒಂದು ಆಶ್ರಮವನ್ನು ಸಕಲಭಕ್ತರಿಂದ ನಿರ್ಮಿಸಿಕೊಂಡು ಭಕ್ರೋದ್ಧಾರ ಕಾರ್ಯ ಮಾಡಿದ್ದು ಸ್ತುತ್ಯಾರ್ಹವಾದುದು. ಇದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
ಡೊಂಗರಗಾoವದ ಸರಸ್ವತಿ ಪ್ರಕಾಶನದಿಂದ 2017 ರಲ್ಲಿ ಪ್ರಕಟಗೊಂಡ ಕೃತಿಯಲ್ಲಿ 124 ಪುಟಗಳಿದ್ದು 100 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ
