ಪಕ್ಷ ಎಲ್ಲವನ್ನು ಕೊಟ್ಟಿದೆ ಕಡೆಗಣಿಸುವ ಪ್ರಶ್ನೆ ಎಲ್ಲಿ ಬಂತು? :ಮಾಜಿ ಸಿಎಂ ಸದಾನಂದ ಗೌಡ ಖಡಕ್ ಉತ್ತರ
ಪಕ್ಷ ಎಲ್ಲವನ್ನು ಕೊಟ್ಟಿದೆ ಕಡೆಗಣಿಸುವ
ಪ್ರಶ್ನೆ ಎಲ್ಲಿ ಬಂತು? :ಮಾಜಿ ಸಿಎಂ ಸದಾನಂದ ಗೌಡ ಖಡಕ್ ಉತ್ತರ
ಕಲಬುರಗಿ : ನನ್ನ ಪಕ್ಷವು ನನಗೆ ಎಲ್ಲವನ್ನೂ ಕೊಟ್ಟಿದೆ. ರಾಜ್ಯ ಸಭಾ ಸ್ಥಾನ ಕೊಡದೆ ಕಡೆಗಣಿಸಿದೆ ಎಂಬುದು ಶುದ್ಧ ಸುಳ್ಳು. ಅಂತಹ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ನೀಡಿ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಜೂನ್ 13 ರಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಾಗಿದ್ದದ್ದು ನಿಜ. ಆದರೆ ಪಕ್ಷದ ತೀರ್ಮಾನಕ್ಕೆ ತಲೆಬಾಗಬೇಕು.ನನಗೇನೂ ಬೇಸರವಿಲ್ಲ.ಇದು ಮಾಧ್ಯಮದ ಸೃಷ್ಟಿ. ರಾಜ್ಯದಲ್ಲಿ ಇರುವ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಹಲವಾರು ಆಕಾಂಕ್ಷಿಗಳಿದ್ದರು. ಪಕ್ಷ ಕೈಗೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಎಂದು ಅವರು ಹೇಳಿದರು. ಪಕ್ಷದಲ್ಲಿ ಶಾಸಕ ಲೋಕಸಭಾ ಸದಸ್ಯ ಮುಖ್ಯಮಂತ್ರಿ ಕೇಂದ್ರ ಸಚಿವನಾಗಿ ಕಾರ್ಯನಿರ್ವಹಿಸಿದ ತಳಮಟ್ಟದ ಕಾರ್ಯಕರ್ತ ಯಾರಾದರೂ ಇದ್ದರೆ ಅದು ನಾನು ಮಾತ್ರ ಎಂದು ಅಭಿಮಾನದಿಂದ ಹೇಳಿದರು.ಪಕ್ಷ ಯಾವ ಜವಾಬ್ದಾರಿಯನ್ನು ನೀಡಿದರೂ ಸಮರ್ಥವಾಗಿ ನಿರ್ವಹಿಸುವ ಒಬ್ಬ ಕಾರ್ಯಕರ್ತನಾಗಿ ಬೆಳೆದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಪಕ್ಷದ ಕೆಲಸಕ್ಕಾಗಿ ಈಗಲೂ ಕೂಡ ಸದಾ ಚಟುವಟಿಕೆಯಲ್ಲಿದ್ದು ಅದಕ್ಕಾಗಿ ಕಲಬುರಗಿ,ಕೊಪ್ಪಳ ಪ್ರವಾಸ ಕೈಗೊಂಡಿದ್ದೇನೆ ಎಂದರು. ಸಿಎಂ ಡಿಕೆಶಿ ಮನೆಗೆ ಭೇಟಿಯಾದ ನಂತರ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದೀರಿ ಎಂಬ ಗುಸು ಗುಸು ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ. ಸಿಎಂ ಆದವರು ಹಿಂದಿನ ಸಿಎಂಗಳ ಜೊತೆ ಅನುಭವ ಪಡೆಯಲು ಸೌಹಾರ್ದ ಭೇಟಿ ನೀಡುವುದಕ್ಕೆ ಅಪಾರ್ಥ ಕಲ್ಪಿಸಬಾರದು. ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಹಾಗೂ ನನ್ನ ಮನೆಗೆ ಬಂದು ಮಾತುಕತೆ ಮಾಡಿದ್ದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ. ರಹಸ್ಯ ಭೇಟಿ ಎಂಬುದು ಅದು ಕಪೋಲ ಕಲ್ಪಿತ ವಿಚಾರ. ಅಂತಹ ಕೆಲಸ ಮಾಡುವ ಕಾರ್ಯಕರ್ತನಲ್ಲ ನಾನು ಆರ್ ಎಸ್ ಎಸ್ ನಿಂದ ಬೆಳೆದು ಬಿಜೆಪಿಯಲ್ಲಿ ಗೌರವದ ಸ್ಥಾನಗಳನ್ನು ಅಲಂಕರಿಸಿದ ವ್ಯಕ್ತಿ ಎಂದು ನೇರವಾಗಿ ಉತ್ತರಿಸಿದರು.
*ವಿಶ್ವಾಸ ಭರಿತ ರಾಜಕಾರಣ ಮೋದಿ ಆಡಳಿತದ ವೈಶಿಷ್ಟ್ಯ*
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 12 ವರ್ಷಗಳ ಆಡಳಿತವು ವಿಶ್ವಾಸ ಭರಿತ ರಾಜಕಾರಣದ ಮತ್ತು ಅಭಿವೃದ್ಧಿಯ ಹೊಸ ಯುಗವಾಗಿದೆ. ವಾಜಪೇಯಿಯ ನಂತರ ಈ ರೀತಿಯಾಗಿ ರಾಷ್ಟ್ರದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಗೌರವವನ್ನು ಹೆಚ್ಚು ಮಾಡಿದ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ. ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಕಟ್ಟಲು ಮೋದಿಯವರು ಭಾರತದ 140 ಕೋಟಿ ಜನರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ರೈತರ ರಸ ಗೊಬ್ಬರದ ಪೂರೈಕೆಯ ಏರುಪೇರಿನ ಬಗ್ಗೆ ಉತ್ತರಿಸಿ. ಪೂರೈಕೆಯ ಹೊಣೆ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದು. ಆದರೆ ರಸಗೊಬ್ಬರ ಕಚ್ಚಾ ವಸ್ತುಗಾಗಿ ವಿದೇಶಿ ಮಾರುಕಟ್ಟೆ ಅವಲಂಬಿತವಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು ನಿಜ. ಆದರೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿದಷ್ಟು ಕೇಂದ್ರ ಸರಕಾರ ಪೂರೈಕೆ ಮಾಡುತ್ತಿದೆ. ರಾಜ್ಯ ಸರ್ಕಾರ ಸಕಾಲದಲ್ಲಿ ಬೇಡಿಕೆ ಸಲ್ಲಿಸದೆ ರೈತರಿಗೆ ಈಗ ಸಮಸ್ಯೆಯನ್ನು ಉಂಟು ಮಾಡಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ವಿಧಾನ ಪರಿಷತ್ ಸದಸ್ಯರಾದ ಡಾ. ಬಿಜಿ ಪಾಟೀಲ್ ಶಶಿಲ್ ನಮೋಶಿ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರು, ಶರಣಪ್ಪ ತಳವಾರ್ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ್ ರಾಯಕೋಡ್ ಮತ್ತಿತರರು ಇದ್ದರು.
