ವೇತನಕ್ಕಾಗಿ ದಿನಗೂಲಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರ ಪರ ದಸಂಸ ಪ್ರತಿಭಟನೆ

ವೇತನಕ್ಕಾಗಿ ದಿನಗೂಲಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರ ಪರ ದಸಂಸ ಪ್ರತಿಭಟನೆ

|ವೇತನಕ್ಕಾಗಿ ದಿನಗೂಲಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರ ಪರ ದಸಂಸ ಪ್ರತಿಭಟನೆ |

ವರ್ಷ ಕಳೆದರೂ ಸಂಬಳ ಇಲ್ಲ: ಪೌರ ನೌಕರರ ಆಕ್ರೋಶ :..

ಶಹಾಬಾದ್: ನಗರವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಇರಿಸುವ ಮತ್ತು ಕುಡಿಯುವ ನೀರು, ಕಸದ ವಿಲೇವಾರಿ ಬೇಸರವಿಲ್ಲದೆ ದಿನನಿತ್ಯ ಕೆಲಸವನ್ನು ನಿರ್ವಹಿಸುವ ನಗರಸಭೆ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಸಂಬಳ 14 ತಿಂಗಳಿಂದ ನೀಡದೆ ಅವರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ನಗರ ಸಭೆ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು. 

ಅವರು ನಗರಸಭೆ ಎದುರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರಸಭೆ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ಉಳಿದಿರುವ ಸಂಬಳವನ್ನು ನೀಡಲು ಮತ್ತು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು

ನಗರಸಭೆ ದಿನಗೂಲಿ ನೌಕರರಾದ 20 ಜನರಿಗೆ 14 ತಿಂಗಳಿಂದ ಸಂಬಳ ಹಾಗೂ ಹೊರಗುತ್ತಿಗೆ ನೌಕರರಾದ 40 ಜನರಿಗೆ 12 ತಿಂಗಳಿನಿಂದ ಸಂಬಳ ನೀಡದೆ ಯಂತ್ರದಂತೆ ಕೆಲಸ ಮಾಡಲು ಒತ್ತಡ ಹೇರಿ ಸಂಬಳವಿಲ್ಲದೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಕಾರ್ಮಿಕರ ಕುಟುಂಬ ಅವರ ಮಕ್ಕಳು ಶಿಕ್ಷಣ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ನಗರ ಸಭೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದರು.

ನಗರ ಸಭೆಯಲ್ಲಿ ಎಲ್ಲಾ ಕಾಮಗಾರಿಗಳ ಬಿಲ್ಲುಗಳು ಸಕಾಲಕ್ಕೆ ಪಾಸಾಗುತ್ತವೆ, ಆದರೆ ಪೌರ ಕಾರ್ಮಿಕರ ನೌಕರರ ಸಂಬಳ ಮಾತ್ರ ನಿಲ್ಲುತ್ತದೆ ಇದಕ್ಕೆ ಕಾರಣ ಲಂಚ ತಾಂಡವಾಡುತ್ತಿದೆ ಕಮಿಷನ್ ಕೊಟ್ಟರೆ ಮಾತ್ರ ಸಂಬಳ ಮಾಡುತ್ತೇವೆ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು. 

ಕಾರ್ಮಿಕರ ಜೀವನದ ಜೊತೆ ಆಟ ಆಡಬೇಡಿ ಕೂಡಲೇ ನಗರ ಸಭೆಯ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ಉಳಿದ ಎಲ್ಲಾ ಸಂಬಳವನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಸಂಬಳ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿ ಪ್ರತಿಭಟನಾ ಧರಣಿಯನ್ನು ವಾಪಸ್ಸು ಪಡೆದರು.

ಪ್ರತಿಭಟನಾ ಧರಣಿಯಲ್ಲಿ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರಿ, ಉಪ ವಿಭಾಗದ ಸಂಚಾಲಕ ಉದಯ ಸಾಗರ, ಪೂಜಪ್ಪ ಮೇತ್ರಿ, ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರ, ಮಲ್ಲಿಕಾರ್ಜುನ ಹಳ್ಳಿ, ಶಿವಮೂರ್ತಿ ಪಟ್ಟೆದಾರ, ಮಲ್ಲಣ್ಣ ಮರತೂರ, ಹನುಮಂತ ಪವಾರ, ಈರಣ್ಣ ಕುರಿ, ಅನಿಲ ಹೊನಗುಂಟಿ, ಬಲಭೀಮ ಪವಾರ, ಮಲ್ಲಿಕಾರ್ಜುನ ಕಟ್ಟಿ, ನಗರ ಸಭೆ ಮಾಜಿ ಸದಸ್ಯರಾದ ರವಿ ರಾಠೋಡ್, ಶರಣು ಪಗಲಾಪೂರ, ಸೂರ್ಯಕಾಂತ ಕೋಬಾಳ ಸೇರಿದಂತೆ ನೂರಾರು ಜನ ಸಾರ್ವಜನಿಕರು, ನಗರಸಭೆ ನೌಕರರು ಭಾಗವಹಿಸಿದ್ದರು. 

ಪಿಎಸ್ಐ ಚಂದ್ರಕಾಂತ ಮಕಾಲೆ ಮತ್ತು ಸಿಬ್ಬಂದಿಯವರಿಂದ ಪೊಲೀಸ್ ಬಂದೋ ಬಸ್ತು ಮಾಡಲಾಗಿತ್ತು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕ ತಹಶೀಲ್ದಾರ ನೀಲಪ್ರಭಾ ಬಬಲಾದ ಮತ್ತು ನಗರ ಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ ಹಾಗೂ ಕಾಡಾ ಅಧ್ಯಕ್ಷ ಡಾ. ಎಂ ಎ ರಶೀದ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ, "ಹೊರಗುತ್ತಿಗೆ ನೌಕರರಿಗೆ ಮತ್ತು ದಿನಗೂಲಿ ನೌಕರರಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಸಂಬಳ ನೀಡುತ್ತೇನೆ ಮತ್ತು ನಗರಸಭೆ ಅಕೌಂಟೆಂಟ್ ನಾರಾಯಣ ರೆಡ್ಡಿ ವರ್ಗಾವಣೆ ಮಾಡಲು ಅಥವಾ, ಸೆಕ್ಷನ್‌ ಬೇರೆ ಯವರಿಗೆ ನೀಡಲು ಆಶ್ವಾಸನೆ ನೀಡಿದರು ಹಾಗೂ ಇತರೆ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಮತ್ತು ಯಾವುದೇ ಕಾರಣಕ್ಕೂ ಕಾರ್ಮಿಕರ ಸಂಬಳವನ್ನು ನಿಲ್ಲದಂತೆ ಕ್ರಮ ಕೈಗೊಳ್ಳುತ್ತೇನೆ ಹಾಗೆ ಹಂತ ಹಂತವಾಗಿ ಬಾಕಿ ಉಳಿದಿರುವ ಎಲ್ಲಾ ಸಂಬಳವನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ಪೌರಾಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು"