ಪತ್ರಿಕೋದ್ಯಮ ಜನರ ಧ್ವನಿಯಾಗಲಿ : ಇಕ್ರಮ್ ಶರೀಫ್

ಪತ್ರಿಕೋದ್ಯಮ ಜನರ ಧ್ವನಿಯಾಗಲಿ :  ಇಕ್ರಮ್ ಶರೀಫ್

ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಪತ್ರಿಕೋದ್ಯಮ ಜನರ ಧ್ವನಿಯಾಗಲಿ : ಇಕ್ರಮ್ ಶರೀಫ್

ಕಲಬುರಗಿ : ಪ್ರಜಾಪ್ರಭುತ್ವದ ಯಶಸ್ವಿಗೆ ಪತ್ರಿಕೋದ್ಯಮವು ಭದ್ರಬುನಾದಿಯಾಗಿದ್ದು ಪತ್ರಕರ್ತರು ಸರಕಾರ ಮತ್ತು ಜನರ ಮಧ್ಯೆ ಧ್ವನಿಯಾಗಿ ಪತ್ರಿಕೋದ್ಯಮ ರಂಗವು ಸದೃಢವಾಗಿ ಬೆಳೆಯಲಿ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಇಕ್ರಮ್ ಶರೀಫ್ ಹೇಳಿದರು. 

   ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಬುರಗಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ (ಜುಲೈ 27ರಂದು) ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ವಿ. ಎನ್ ಕಾಗಲಕರ್ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿ ಪತ್ರಕರ್ತರು ಸರಕಾರಕ್ಕೆ ನೀತಿ ನಿರೂಪಣೆ ಮಾಡಲು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸಾಂಪ್ರದಾಯಿಕ ಪತ್ರಿಕೋದ್ಯಮವು ಇಂದಿನ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆ ಸುದ್ದಿಯ ಪಾವಿತ್ರ್ಯತೆ ಯನ್ನು ತಿಳಿಯಲು ಅತ್ಯಂತ ಸಹಕಾರಿ ಯಾಗಿದೆ ಹಾಗೂ ನಾಯಕತ್ವ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ. ಪಾರದರ್ಶಕ ಮತ್ತು ವಿಶ್ವಾಸಾರ್ಹ ಸುದ್ದಿಯನ್ನು ಜನರಿಗೆ ಮುಟ್ಟಿಸುವ ಪತ್ರಕರ್ತರ ಸೇವೆ ಅತ್ಯಂತ ಪವಿತ್ರ ವಾಗಿದೆ. ಪತ್ರಕರ್ತರು ಕೇವಲ ಪ್ರಶಂಸೆಗೆ ಮಾತ್ರ ಮೀಸಲಾಗದೆ ಕ್ರಿಯಾತ್ಮಕ ವಿಮರ್ಶೆ ಮತ್ತು ಟೀಕೆ ಟಿಪ್ಪಣಿಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುವಂತಾದರೆ ಪತ್ರಿಕೋದ್ಯಮ ಸದೃಢವಾಗಿ ಬೆಳೆಯಲು ಸಾಧ್ಯ. ಪತ್ರಕರ್ತರು ಹಾಗೂ ಜಿಲ್ಲಾಡಳಿತ ಪೂರಕವಾಗಿ ಕೆಲಸ ಮಾಡಿದರೆ ಕ್ಷಿಪ್ರವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪತ್ರಿಕೋದ್ಯಮ ಸದೃಢವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

   ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ ಶುಭ ಕೋರಿದರು. 

    ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಪತ್ರಕರ್ತರಾದ ಸತೀಶ್ ಜೇವರ್ಗಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅರುಣ್ ಕುಮಾರ್ ಕದಂ, ಕಾರ್ಯನಿರತ ಪತ್ರಕರ್ತರ ರಾಜ್ಯ ಸಮಿತಿಯ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಸ್ವಾಗತಿಸಿದರು. ರಾಜಕುಮಾರ ಉದನೂರು ನಿರೂಪಣೆ ಮಾಡಿದರು. ರಾಚಪ್ಪ ಜಂಬಗಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಬಾಬುರಾವ್ ಕೋಬಾಳ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ದೇವೇಂದ್ರಪ್ಪ ಅವಂಟಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಪತ್ರಕರ್ತರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಪತ್ರಕರ್ತರಾದ ಪ್ರಭಾಕರ ಜೋಶಿ, ಚಂದ್ರಕಾಂತ ಹುಣಸಗಿ ಪ್ರವೀಣ ರೆಡ್ಡಿ, ದೇವೇಂದ್ರಪ್ಪ ಅವಂಟಿ, ಚಂದ್ರಶೇಖರ ಕವಲಗಾ ಅವರಿಗೆ ವಿ .ಎನ್ ಕಾಗಲಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 25 ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಭೀಮಶಂಕರ ಫೀರೋಜಾಬಾದ ಸ್ವಾಗತಿಸಿದರು, ರಾಜಕುಮಾರ ಉದನೂರ ನಿರೂಪಿಸಿದರು,ಶರಣಗೌಡ ಪಾಟೀಲ ಪಾಳಾ, ಸದಾನಂದ ಪೆರ್ಲ, ಸೇರಿದಂತೆ ಅನೇಕ ಪತ್ರಕರ್ತರು ಭಾಗವಹಿಸಿದ್ದರು.

ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಗಳಿಂದ ಅತ್ಯಂತ ವೇಗವಾಗಿ ಎಲ್ಲ ಮಾಹಿತಿ ಎಲ್ಲ ಜನರಿಗೆ ಹರಡುತ್ತಿರುವುದರಿಂದ ಪತ್ರಕರ್ತರು ಹಾಗೂ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ತಿರುಚಿದ ಸುದ್ದಿ,ಯಾವುದು ಡೀಪ್ ಫೇಕ್ ಸುದ್ದಿ ಎಂಬುದನ್ನು ವರ್ಗೀಕರಣ ಮಾಡಲು ಕಷ್ಟವಾದ ಸಂದರ್ಭದಲ್ಲಿ ಸತ್ಯ ಮತ್ತು ನಂಬಿಕೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ಇಬ್ಬರ ಮೇಲಿದ್ದು ಅಂತಹ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ. ಸುಳ್ಳು ಸುದ್ದಿ ವಿರುದ್ಧ ಹಾಗೂ ಸತ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಜವಾಬ್ದಾರಿ ಪತ್ರಕರ್ತರು ಹಾಗೂ ಪೊಲೀಸರು ನಿರ್ವಹಿಸಬೇಕಾಗಿದೆ. 

 - ಡಾ. ಶರಣಪ್ಪ ಎಸ್. ಡಿ

ನಗರ ಪೊಲೀಸ್ ಆಯುಕ್ತರು, ಕಲಬುರಗಿ. 

ಪತ್ರಕರ್ತರ ಮತ್ತು ಪೊಲೀಸರ ಕರ್ತವ್ಯ ಸಮಾನವಾಗಿದ್ದು ರಾಷ್ಟ್ರ ಕಟ್ಟುವ ಕೆಲಸದಲ್ಲಿ ಬಲು ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಪ್ರಸ್ತುತ ಸಂದರ್ಭದಲ್ಲಿ ಸತ್ಯ ತಿಳಿಯಲು ಪತ್ರಿಕೆ ಮಹತ್ವದ ಮಾಧ್ಯಮವಾಗಿದ್ದು ಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಶ್ಲಾಘನೀಯ. 

   - ಅಡ್ಡೂರು ಶ್ರೀನಿವಾಸಲು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ. 

ಪತ್ರಕರ್ತರಾಗಲು ಬದ್ಧತೆ ಮುಖ್ಯವಾಗಿದ್ದು ಘನತೆ ಗೌರವದಿಂದ ಕೆಲಸ ಮಾಡಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ. ನಾಡಿನ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪತ್ರಕರ್ತರು ಹಗಲಿರುಳು ಶ್ರಮಿಸುತ್ತಿದ್ದು ಅವರ ಸೇವೆ ಅನನ್ಯವಾದದು. ಕಲಬುರಗಿ ಜಿಲ್ಲೆ ಈಗ ರಾಜಕೀಯ ಶಕ್ತಿ ಕೇಂದ್ರವಾಗಿದ್ದು ಮುಖ್ಯಮಂತ್ರಿಗಳು, ಮಂತ್ರಿಗಳ ಆಯ್ಕೆ ಹಾಗೂ ಇತರ ರಾಜ್ಯಗಳ ರಾಜಕೀಯ ಭವಿಷ್ಯವನ್ನು ನಿರ್ಣಯಿಸುವ ಕೇಂದ್ರವಾಗಿ ಭವಿಷ್ಯವನ್ನು ನಿರ್ಣಯಿಸುವ ಪ್ರಮುಖ ಜವಾಬ್ದಾರಿ ವಹಿಸುತ್ತಿರುವ ನಾಯಕರನ್ನು ಹೊಂದಿರುವುದರಿಂದ ಎಲ್ಲವೂ ಅಭಿವೃದ್ಧಿಗೆ ಪೂರಕವಾಗಿ ಬಳಕೆಯಾಗಬೇಕು. 

-ಶಿವಾನಂದ ತಗಡೂರು

ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ