ಕರುಣಾ ಸಲಗರ ಅವರ ಬದುಕಿನೆಡೆಗೆ
ಕರುಣಾ ಸಲಗರ ಅವರ ಬದುಕಿನೆಡೆಗೆ
ಕಥೆ, ಕವನ, ಹಾಗೂ ಆಧುನಿಕ ವಚನ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿರುವ ಕರುಣಾ ಸಲಗರ ಅವರು ಕೆಂಬಾಳೆ ನೆಲದಿಂದ ಧರಿನಾಡಿನ ಕೆoಮ್ಮಣ್ಣಿನಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಪ್ರತಿಮ ಸಾಧಕಿ.
ಹನ್ನೆರಡನೆಯ ಶತಮಾನದ ವಚನಗಳಲ್ಲಿ ಇಂದಿನ ತಲ್ಲಣದ ಬದುಕಿಗೆ ಅಗತ್ಯ ಮಾರ್ಗಗಳು ದೊರಕುತ್ತವೆ ಎಂಬುದು ಹಿರಿಯರಾದ ಕರುಣಾ ಸಲಗರ ಅವರಿಗೆ ಅನುಭವಕ್ಕೆ ಬಂದಿದೆ. ಹಾಗಾಗಿ ಬದುಕಿನೆಡೆಗೆ ಸಾಗುವ ದಾರಿಯನ್ನು ಅವರು ಶರಣರ ವಚನಗಳಲ್ಲಿ ಕಂಡುಕೊಳ್ಳುತ್ತಾರೆ. ಪ್ರತಿಯೊಂದು ಲೇಖನ ವಚನಗಳ ದಾರಿಯಲ್ಲಿಯೇ ಸಾಗುವದನ್ನು ನೋಡಬಹುದು.
ಇದರಲ್ಲಿ ಸುಮಾರು 26 ಲೇಖನಗಳನ್ನು ಸಮೀಕರಿಸಿದ್ದಾರೆ. ಈ ಎಲ್ಲಾ ಲೇಖನಗಳನ್ನು ಗಮಿಸುತ್ತಾ ಹೋದರೆ ಇವುಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯವು ಬದುಕಿನ ತಾತ್ವಿಕ ಚಿಂತನೆ ಮಾಡುವ ಲೇಖನಗಳು ಇಲ್ಲಿ ಲೇಖಕಿ ಬದುಕನ್ನು ಕುರಿತು ಆಳವಾದ ಚಿಂತನೆ ನಡೆಸಿದ್ದಾರೆ. ಉದಾಹರಣೆಗೆ ಜೀವನದ ಪರಮ ಗುರಿ ಏನು, ಸಾರ್ಥಕತೆಯ ದಾರಿ, ಅಶಾಶ್ವತ ಬದುಕು, ಜೀವನದ ಪರಮ ಗುರಿ ಏನು, ಸಾವಿಗಿಂತ ಬದುಕು ದೊಡ್ಡದು, ಸಾರ್ಥಕ ಬದುಕು.... ಮೊದಲಾದ ಶೀರ್ಷಿಕೆಗಳನ್ನು ನಾವು ಓದಿದರೂ ಸಾಕು ಅವರ ಚಿಂತನೆಯ ದಾರಿ ಯಾವುದು ಎಂಬುದು ಅರ್ಥವಾಗುತ್ತದೆ. ಬದುಕು ಸುಮ್ಮನೆ ಬಂದುದಲ್ಲ ಅದರ ಸಾರ್ಥಕತೆ ನಮ್ಮ ಕೈಯಲ್ಲಿದೆ ಎನ್ನುವದನ್ನುಸಾರಿರುವ ಅವರು ಬದುಕಲು ಕಲಿಯೋಣ ಎಂಬ ಲೇಖನದಲ್ಲಿ ಬದುಕು ಬಹಳ ಅದ್ಭುತವಾಗಿದೆ. ಸುಂದರವಾಗಿದೆ. ತೆರೆದ ಕಣ್ಣು ಮತ್ತು ವಿಶಾಲವಾದ ಹೃದಯದಿಂದ ನೋಡಿದರೆ ಅದು ಕಾಣಿಸುತ್ತದೆ ಎನ್ನುತ್ತಾ ಅವರು ಬದುಕನ್ನು ಕಂಡ ದೃಷ್ಟಿಕೋನದಲ್ಲಿ ವಿವರಿಸಿದ್ದಾರೆ.
ನಾವು ಬದುಕಿನ ಬಗ್ಗೆ ಚಿಂತಿಸಬೇಕಾದ ಈ ರೀತಿಯನ್ನು ಇನ್ನೊಂದು ಲೇಖನದಲ್ಲಿ ಚಿಂತಿಸುತ್ತ “ನಮಗೆ ಬದುಕಲು ತುಂಬಾ ವರ್ಷಗಳು ಉಳಿಯೋದಿಲ್ಲ ಹಿಂದ ಇದಷ್ಟು ಕಾಲ ನಾವು ಮುಂದ ಉಳಿಯಲ್ಲ ಅನ್ನುವದು ನಮಗ ಗೊತ್ತೇ ಅದ. ಆದ್ರು ಇವೆಲ್ಲ (50 ರ ನಂತರ ಬದುಕು.....) ಎಂಬ ಮಾತು ಬರೆಯುತ್ತಾರೆ. ಹೀಗೆ ಅವರ ಈ ಭಾಗದ ಎಲ್ಲ ಲೇಖನಗಳು ಬದುಕನ್ನು ಧನಾತ್ಮಕವಾಗಿ ತೆಗೆದುಕೊಳ್ಳುವದು ಹೇಗೆ ಎನ್ನುವದನ್ನು ಸಾರಿವೆ.
ಎರಡನೆಯ ಬಗೆಯ ಲೇಖನಗಳು ಬದುಕನ್ನು ಸುಂದರ ಮಾಡಿಕೊಳ್ಳಲು ಆಚರಿಸಬಹುದಾದ ರೀತಿಯನ್ನು ವಿವರಿಸುವ ಲೇಖನಗಳಾಗಿವೆ. ಇವುಗಳ ಉದ್ದೇಶ ಬದುಕನ್ನು ಸುಂದರವಾಗಿ ಸಾಗಿಸಲು ಆಚರಿಸಬಹುದಾದ ನಿಯಮಗಳನ್ನು ಕುರಿತ ಲೇಖನಗಳು. ಇಲ್ಲಿ ದೇವರಿದ್ದಾನೆ ಎಂಬುದನ್ನು ನಂಬಿದ ಅಸ್ತಕ ಮನಸ್ಸೆಂದು ನಾವು ಅವನಿಗೆ ಋಣಿಯಾಗಿರಬೇಕಾದ ರೀತಿಯನ್ನು ವಿವರಿಸುತ್ತವೆ. ಉದಾಹರಣೆಗೆ ದೇವರಿಗೊಂದು ಧನ್ಯವಾದ, ಸಂಸ್ಕಾರ, ಅರ್ಚನೆ, ಲಿಂಗ ಪೂಜೆಯ ಫಲ, ಸತ್ಯ ದರ್ಶನದ ಪರಿ, ಅಂಗ ಲಿಂಗ ವಾಗುವ ಪರಿ, ಪುರಾಣ ಕೇಳಿ ಪುಣ್ಯ ಕಟ್ಟೋಳ್ಳೋಣ, ಹೃದಯದಲ್ಲಿ ಪ್ರೇಮ ನದಿ ಹರಿಯಲಿ, ಮುಂತಾದ ಹೆಸರುಗಳನ್ನು ಓದಿದರೂ ಸಾಕು, ಅಲ್ಲಿನ ಆಲೋಚನೆಗಳ ಎತ್ತರ ನಮಗೆ ಅರಿವಾಗುತ್ತದೆ. ಉದಾಹರಣೆಗೆ ಹೃದಯದಲ್ಲಿ ಪ್ರೇಮ ನದಿ ಹರಿಯಲಿ ಎಂಬ ಲೇಖನದಲ್ಲಿ "ನಾವ್ಯಾರು ಈ ಭೂಮಿಯ ಮೇಲೆ ಸಾವಿರಾರು ವರ್ಷ ಇರಲು ಬಂದಿಲ್ಲ ನಮ್ಮ ಸರಾಸರಿ ಆಯುಷ್ಯ 100, 60, 70 ವರ್ಷಗಳು, ಈ ಪುಟ್ಟ ಪಯಣದಲ್ಲಿ ಎಷ್ಟು ಅಸಹನೆ, ಅತೃಪ್ತಿ, ತುಂಬಿಕೊಂಡಿದೆ ಎಂದರೆ ಮನುಷ್ಯ ಸಂತೋಷವಾಗಿ ಇರುವದನ್ನು ಮರೆತಿದ್ದಾನೆ" ಎನ್ನುವ ಸಾಲುಗಳಲ್ಲಿ ಬದುಕು ಆನಂದಮಯವಾಗಿರಲು ನಮ್ಮಲ್ಲಿ ಇರಬೇಕಾದುದೇನು ಎಂಬುದರ ಚಿಂತನೆಯಿದೆ. ಮೇಲೆ ಉದಾಹರಿಸಿದ ಲೇಖನಗಳು ಒಂದಲ್ಲ ಒಂದು ಬಗೆಯ ಇಂತಹ ವಿಚಾರಗಳನ್ನೇ ಒಳಗೊಂಡಿವೆ.
ಇನ್ನು ಮೂರನೆಯ ಬಗೆಯವು ವಚನ ಸಾಹಿತ್ಯ ಕುರಿತಾದ ಚಿಂತನೆಯ ಲೇಖನಗಳು. ಇವು ಶರಣರ ದರ್ಶನ ಚಿಂತನೆಯ ತಾತ್ವಿಕ ಲೇಖನಗಳು ಹನ್ನೆರಡನೆಯ ಶತಮಾನದ ಶರಣರು ಸಾರಿದ ಕೆಲವು ದಾರ್ಶನಿಕ ತತ್ವಗಳನ್ನು ಇಲ್ಲಿ ಲೇಖಕರು ಲೇಖನಿಯಾಗಿಸಲು ಯತ್ನಿಸಿದ್ದಾರೆ. ಉದಾಹರಣೆಗೆ ವಿಭೂತಿ, ರುದ್ರಾಕ್ಷಿ, ಅಂಗ ಲಿಂಗವಾಗುವ ಪರಿ, ಗಣಾಚಾರಿ, ವಚನಗಳು ಶಾಂತಿ ಸೂತ್ರಗಳು ಮೊದಲಾದ ಲೇಖನಗಳು ವಚನ ಸಾಹಿತ್ಯ ಮತ್ತು ಅದರ ತಾತ್ವಿಕ ಸಂಗತಿಗಳ ಚರ್ಚೆಯನ್ನು ಮಾಡುತ್ತವೆ. ರುದ್ರಾಕ್ಷಿ ಎಂಬ ಲೇಖನದಲ್ಲಿ "ರುದ್ರಾಕ್ಷಿ ಎಂದರೆ ಪ್ರಸನ್ನತೆಯ ದೃಷ್ಟಿಯನ್ನು ರುದ್ರಾಕ್ಷಿ ಎನ್ನುವರು. ಇದೊಂದು ಸಾಧನೆಯ ಮಾರ್ಗಸೂಚಿ. ರುದ್ರ ಎಂದರೆ ಮಹಾಬೆಳಗು. ಇದಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಅಕ್ಷಿ ಎಂದರೆ ಕಣ್ಣು, ರುದ್ರಾಕ್ಷಿ ಎಂದರೆ ಸೂರ್ಯನ ಬೆಳಗಿನಲ್ಲಿ ಬ್ರಹ್ಮಾಂಡದಲ್ಲಿ ಕಾಣುವ ಕಣ್ಣಿಗೆ ಅನಂತ ಕೋಟಿ ಸೂರ್ಯ ಪ್ರಕಾಶಕ್ಕೆ ಮೀರಿದ ಸುಜ್ಜನದ ಮಹಾಬೆಳಗೆ ರುದ್ರಾಕ್ಷಿ" ಎನ್ನುತ್ತಾರೆ. ಅದಕ್ಕೆ ಪೂರಕವಾಗಿ ಶರಣರ ವಚನಗಳನ್ನು ಉದಾಹರಣೆಯಾಗಿ ಕೊಡುತ್ತಾರೆ. ಇದೇ ಸೂತ್ರ ಗಣಾಚಾರಿ, ವಿಭೂತಿ ಮೊದಲಾದ ವಿಷಯಗಳನ್ನು ಚರ್ಚಿಸುವಲ್ಲಿ ಅವರು ಅನುಸರಿಸಿದ್ದಾರೆ. 'ತ್ರಿಕರಣ ಶುದ್ಧ' ಎಂಬ ಲೇಖನದಲ್ಲಿ ಸಾಧಕನು ಶರಣನಾಗಬೇಕಾದರೆ ಅವನಲ್ಲಿ ತನು, ಮನ, ಭಾವ ಶುದ್ಧನಾಗಬೇಕು. ಯಾವ ರೀತಿ ಈ 'ಮೂರು ಶುದ್ಧ ಮಾಡಿಕೊಳ್ಳುವುದು, ದೇವರ ಪೂಜೆ ಪುನಸ್ಕಾರ, ಪುಣ್ಯಕ್ಷೇತ್ರ ಸುತ್ತಿದರೆ ಸಿಗಲಾರದು. ನಾವು ನಮ್ಮ ತನು, ಮನ, ಭಾವವನ್ನು ಶುದ್ಧವಾಗಿಟ್ಟುಕೊಂಡರೆ ದೇವರು ಒಲಿದು ಒಪ್ಪಿಕೊಳ್ಳುವನು' ಎನ್ನುವ ಅವರ ಮಾತುಗಳಲ್ಲಿ ಮೊದಲು ನಮ್ಮ ನಡೆನುಡಿ ಶುದ್ಧವಾದರೆ ಸಾಕು ಎಂಬ ಭಾವನೆಯಿದೆ.
ಅವರು ಈ ಸಂದರ್ಭಕ್ಕೆ ತಕ್ಕಂತೆ ಶರಣರು ದಾರ್ಶನಿಕರ ವಿಚಾರಗಳು ಮತ್ತು ವಚನಗಳು ಅವರ ಲೇಖನಕ್ಕೆ ಅನೂರೂಪವಾಗುವಂತೆ ತುಂಬ ಅಪರೂಪದ ವಚನಗಳನ್ನು ಬಳಸಿಕೊಳ್ಳುತ್ತಾರೆ. ಜೊತೆಗೆ ಅವರು ಬಳಸಿದ್ದ ಶಿಷ್ಟ ಮತ್ತು ಅಪ್ಪಟ ಧರಿನಾಡಿನ ಗ್ರಾಮ್ಯ ಭಾಷೆಗಳ ಹದವರಿತ ಭಾಷೆಯ ಸಂಯೋಜನೆ ಇವು ಗಮನ ಸೆಳೆಯುತ್ತವೆ.
ಅದರೊಂದಿಗೆ ಅವರು ತಂದು ಜೋಡಿಸುವ ಚಿಕ್ಕ ಚಿಕ್ಕ ಕಥೆಗಳು ಇವೆಲ್ಲವುಗಳಿಂದ ಅವರ ಈ ಗದ ಲೇಖನಗಳು ತುಂಬಾ ಸರಾಗವಾಗಿಓದಿಸಿಕೊಂಡು ಹೋಗುತ್ತವೆ. ಹೀಗೆ ಎದುರಿಗೆ ಕೂಡಿಸಿಕೊಂಡು ತಿಳಿ ಹೇಳುವ ಶೈಲಿಯಲ್ಲಿ ಬಂದಿರುವ ಈ ಲೇಖನಗಳಿಗಾಗಿ ಅವರನ್ನು ಅಭಿನಂದಿಸುತ್ತೇನೆ.
ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ
