ಆಗಸ್ಟ್ 13ರಂದು ಕರ್ನಾಟಕ ವಿಧಾನಸಭೆ ಅಧಿವೇಶನಕ್ಕೆ ರಾಜ್ಯಪಾಲರ ಆಹ್ವಾನ
ಆಗಸ್ಟ್ 13ರಂದು ಕರ್ನಾಟಕ ವಿಧಾನಸಭೆ ಅಧಿವೇಶನಕ್ಕೆ ರಾಜ್ಯಪಾಲರ ಆಹ್ವಾನ
ಬೆಂಗಳೂರು, ಜು. 28: ಕರ್ನಾಟಕ ವಿಧಾನಸಭೆಯ ಮುಂದಿನ ಅಧಿವೇಶನವು 2026ರ ಆಗಸ್ಟ್ 13ರಂದು (ಗುರುವಾರ) ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಈ ಕುರಿತು ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಭಾರತ ಸಂವಿಧಾನದ ವಿಧಿ 174(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಸಭೆ ಸೇರುವಂತೆ ಆಹ್ವಾನಿಸಿದ್ದಾರೆ.
ರಾಜ್ಯಪಾಲರ ಆದೇಶದ ಮೇರೆಗೆ ಹಾಗೂ ಅವರ ಹೆಸರಿನಲ್ಲಿ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್ ಅವರು ಅಧಿಸೂಚನೆ ಪ್ರಕಟಿಸಿದ್ದಾರೆ.
ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲು ಸೂಚಿಸಲಾಗಿದ್ದು, ಇದರ ಪ್ರತಿಗಳನ್ನು ವಿಧಾನಸಭೆ, ವಿಧಾನ ಪರಿಷತ್ತು, ರಾಜಭವನ, ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವಾಲಯ, ಮುಖ್ಯಮಂತ್ರಿ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಕಚೇರಿ ಸೇರಿದಂತೆ ಸಂಬಂಧಿತ ಇಲಾಖೆಗಳಿಗೆ ಕಳುಹಿಸಲಾಗಿದೆ.
ಈ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ಆಡಳಿತಾತ್ಮಕ ಹಾಗೂ ಶಾಸನಾತ್ಮಕ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
