ನೂಪುರ ನರ್ತನ' ಕಾರ್ಯಕ್ರಮದಲ್ಲಿ 5 ವಿದ್ಯಾರ್ಥಿನಿಯರ ರಂಗಾರೋಹಣ

ನೂಪುರ ನರ್ತನ' ಕಾರ್ಯಕ್ರಮದಲ್ಲಿ 5 ವಿದ್ಯಾರ್ಥಿನಿಯರ ರಂಗಾರೋಹಣ

ನೂಪುರ ನರ್ತನ' ಕಾರ್ಯಕ್ರಮದಲ್ಲಿ 5 ವಿದ್ಯಾರ್ಥಿನಿಯರ ರಂಗಾರೋಹಣ

ಬೆಂಗಳೂರು: ನಿರಂತರ ನೃತ್ಯ ಶಾಲೆಯ ವತಿಯಿಂದ ಮಲ್ಲೇಶ್ವರದ ಸೇವಾಸದನ ರಂಗಮಂದಿರದಲ್ಲಿ 'ನೂಪುರ ನರ್ತನ' ಎಂಬ ಭರತನಾಟ್ಯ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ನಾಟ್ಯಾಚಾರ್ಯ ಗುರು ದಂಪತಿಗಳಾದ ವಿದ್ವಾನ್ ಸೋಮಶೇಖರ್ ಚುಡನಾಥ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಿರಂತರ ನೃತ್ಯ ಶಾಲೆಯ ಐವರು ವಿದ್ಯಾರ್ಥಿನಿಯರಾದ *ಕು. ಗಾರ್ಗಿ, ಕು. ಸಾಂಚಿತ ಜಿ. ಭಟ್, ಕು. ಬೆನಿಶಾ ಶೆಟ್ಟಿ, ಕು. ಅದ್ವಿತ ರಾಜ್ ಮತ್ತು ಕು. ಶುಭಾಂಗಿ ಚಟ್ಟೋಪಾಧ್ಯಾಯ ಅವರು ಅಧಿಕೃತವಾಗಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ರಂಗಾರೋಹಣ ಮಾಡುವ ಮೂಲಕ ಕಲಾ ಜಗತ್ತಿಗೆ ಪದಾರ್ಪಣೆ ಮಾಡಿದರು.

ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅನ್ನಮಾಚಾರ್ಯರ 'ಶ್ರೀಮನ್ನಾರಾಯಣ', ಶಿವನ ಪ್ರದೋಷ ತಾಂಡವವನ್ನು ವರ್ಣಿಸುವ ಶಿವಕೃತಿ, 'ತೊಡೆಯ ಮಂಗಳಂ', ದೀಕ್ಷಿತರ 'ಕಂಜದಳಾಯತಾಕ್ಷಿ', 'ಗೋವರ್ಧನ ಗಿರಿಧಾರ', ಪುರಂದರ ದಾಸರ 'ಹನುಮಂತ ದೇವ ನಮೋ' ಮತ್ತು ಡಾ. ಬಾಲಮುರಳಿ ಕೃಷ್ಣ ಅವರ ಪ್ರಸಿದ್ಧ 'ಬೃಂದಾವನಿ ತಿಲ್ಲಾನ' ಪ್ರದರ್ಶನಗೊಂಡವು.

ವಿದುಷಿ ಶ್ರೀಮತಿ ಭಾರತಿವೇಣುಗೋಪಾಲ್ ರವರು ಹಾಡುಗಾರಿಕೆಯಲ್ಲಿ, ವಿದ್ವಾನ್ ಜಿ. ಎಸ್. ನಾಗರಾಜ್ ರವರು ಮೃದಂಗದಲ್ಲಿ ಹಾಗೂ ವಿದ್ವಾನ್ ದೀಪಕ್ ಹೆಬ್ಬಾರ್ ರವರು ವಂಶೀಯಲ್ಲಿ ಸಾತ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮಕ್ಕೆ ಬಹುಮುಖ ಪ್ರತಿಭೆ ಡಾ. ಲಕ್ಷ್ಮೀ ರೇಖಾ ಹಾಗೂ ವಿದ್ವಾನ್ ಡಾ.ಸಾಗರ್ ಟಿ. ಎಸ್. ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಾತನಾಡಿದ ಅತಿಥಿಗಳು ನಿರಂತರ ಸಂಸ್ಥೆಯ ನಿರಂತರ ಸಾಧನೆಯನ್ನು ಹಾಗೂ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ನಿರಂತರ ಸಂಸ್ಥೆಯು ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.