25 ವಾರಗಳನ್ನು ಯಶಸ್ವಿಯಾಗಿ ಪೂರೈಸಿದ ಭುವನೇಶ್ವರಿ ದೇವಿ ಕವಿ ಬಳಗ

25 ವಾರಗಳನ್ನು ಯಶಸ್ವಿಯಾಗಿ ಪೂರೈಸಿದ ಭುವನೇಶ್ವರಿ ದೇವಿ ಕವಿ ಬಳಗ

25 ವಾರಗಳನ್ನು ಯಶಸ್ವಿಯಾಗಿ ಪೂರೈಸಿದ ಭುವನೇಶ್ವರಿ ದೇವಿ ಕವಿ ಬಳಗ

ನರೇಗಲ್ಲ, ಜೂ.14: ಸಾಹಿತ್ಯಾಸಕ್ತರು ಹಾಗೂ ಕವಿಗಳಿಗೆ ಸೃಜನಾತ್ಮಕ ವೇದಿಕೆಯಾಗಿರುವ ಭುವನೇಶ್ವರಿ ದೇವಿ ಕವಿ ಬಳಗ ರಾಜ್ಯ ಘಟಕ ನರೇಗಲ್ಲ ವಾಟ್ಸಾಪ್ ಮಾಧ್ಯಮದ ಮೂಲಕ ನಿರಂತರ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ 25 ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ.

ಬಳಗವು ಕಳೆದ 25 ವಾರಗಳಿಂದ ಪ್ರತಿ ವಾರವೂ ವಿಭಿನ್ನ ಹಾಗೂ ಸಮಾಜಮುಖಿ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕವಿಗಳಿಂದ ಕವನ ರಚನೆಗೆ ಪ್ರೋತ್ಸಾಹ ನೀಡುತ್ತಿದೆ. ಆನ್‌ಲೈನ್ ಕವಿಗೋಷ್ಠಿ, ಕನ್ನಡ ರಾಜ್ಯೋತ್ಸವ, ಕಿತ್ತೂರು ರಾಣಿ ಚೆನ್ನಮ್ಮ, ಸಂಕ್ರಾಂತಿ, ಗಣರಾಜ್ಯೋತ್ಸವ, ವರಕವಿ ದ.ರಾ. ಬೇಂದ್ರೆ, ಶಿವರಾತ್ರಿ, ಶಿಶುನಾಳ ಶರೀಫರು, ಮಹಿಳಾ ಸಾಧನೆ, ಗಾನಯೋಗಿ ಪಂಡಿತ ಪುಟ್ಟರಾಜ ಕವಿಗವಾಯಿಗಳು, ಯುಗಾದಿ, ವಿಶ್ವ ಜಲ ದಿನ, ಶ್ರೀರಾಮನವಮಿ, ಬಸವಣ್ಣನವರ ವಚನಸಾರ, ಪರಿಸರ ಸಂರಕ್ಷಣೆ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಸೇರಿದಂತೆ ಅನೇಕ ಮಹತ್ವದ ವಿಷಯಗಳನ್ನು ನೀಡುವ ಮೂಲಕ ಕವಿಗಳ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸಿದೆ.

ಬಳಗದ ಗೌರವಾಧ್ಯಕ್ಷರಾಗಿ ರವೀಂದ್ರನಾಥ ದೊಡ್ಡಮೇಟಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥಾಪಕ ಅಧ್ಯಕ್ಷರಾಗಿ ಹುಚ್ಚೀರಪ್ಪ ವೀರಪ್ಪ ಈಟಿ ಹಾಗೂ ಕಾರ್ಯದರ್ಶಿಯಾಗಿ ಐ.ಬಿ. ಒಂಟೇಲಿ ಬಳಗದ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಬಳಗದ ಕವಿಗಳ ಕವನಗಳನ್ನು ಶಿಕ್ಷಕರಾದ ಮಹಾದೇವಪ್ಪ ಬೇವಿನಕಟ್ಟಿ ವಿಮರ್ಶಿಸಿ ಮಾರ್ಗದರ್ಶನ ನೀಡುತ್ತಿರುವುದು ವಿಶೇಷವಾಗಿದೆ.

ಸಾಹಿತ್ಯದ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಈ ಬಳಗವು ಮುಂದಿನ ದಿನಗಳಲ್ಲಿ ಇನ್ನಷ್ಟು ಕವಿ ಹೃದಯಗಳನ್ನು ತಲುಪಿ ಕನ್ನಡ ಸಾಹಿತ್ಯ ಸೇವೆಯನ್ನು ವಿಸ್ತರಿಸಲಿ ಎಂದು ಸಾಹಿತ್ಯಾಭಿಮಾನಿಗಳು ಹಾರೈಸಿದ್ದಾರೆ.