ಬೇಳೂರು ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಲು ಒಕ್ಕೊರಲ ನಿರ್ಣಯ
ಬೇಳೂರು ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಲು ಒಕ್ಕೊರಲ ನಿರ್ಣಯ
ಗೋಕರ್ಣದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಲ ರಾಜ್ಯ ಘಟಕ ದ ಸಮಾವೇಶ
ಕಲಬುರಗಿ : ಈಡಿಗ ಸಮಾಜದ ಮುಂದಾಳು ಹಿರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸಂಪುಟ ವಿಸ್ತರಣೆಯ ವೇಳೆ ಅವಕಾಶ ನೀಡಿ ಸಮುದಾಯದ ಬೇಡಿಕೆ ಈಡೇರಿಸಬೇಕೆಂದು ರಾಷ್ಟ್ರೀಯ ಈಡಿಗ ಮಹಾಮಂಡಲದ ಪ್ರತಿನಿಧಿಗಳ ಸಮಾವೇಶದಲ್ಲಿ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಕುಮಟಾ ತಾಲೂಕಿನ ಗೋಕರ್ಣ ಕ್ಷೇತ್ರದ ಪುಣ್ಯಶ್ರಮದಲ್ಲಿ ಜೂನ್ 11ರಂದು ಶ್ರೀ ವಿಧುಶೇಖರ ಭಾರತಿ ಸಭಾಭವನದಲ್ಲಿ ನಡೆದ ಮಹಾಮಂಡಲದ ಎರಡು ದಿನಗಳ ಕರ್ನಾಟಕ ರಾಜ್ಯ ಘಟಕದ 2025 - 26 ನೇ ಸಾಲಿನ ಐದನೇ ವಾರ್ಷಿಕ ಸಭೆಯಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಈಡಿಗ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳು ನಿರ್ಣಯ ಮಂಡಿಸಿದಾಗ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಲಾಯಿತು.
ಈ ಮಹತ್ವದ ನಿರ್ಣಯದಿಂದಾಗಿ ರಾಜ್ಯದ 20 ಜಿಲ್ಲೆಗಳ ಸಮುದಾಯದ ಜನರು ಬೇಳೂರು ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವಂತೆ ಬಲವಾದ ಒತ್ತಡ ಹಾಕಿ ಒಗ್ಗಟ್ಟಿನ ಧ್ವನಿಗೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಣವಾನಂದ ಶ್ರೀಗಳು ಸಮಾಜದ ಪ್ರತಿನಿಧಿಯಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಈಗಾಗಲೇ ಮೂರು ವರ್ಷ ಅವಕಾಶ ನೀಡಲಾಗಿದೆ. ಈಡಿಗ ಸಮಾಜದ ಪರವಾಗಿ ಗಟ್ಟಿ ಧ್ವನಿ ಎತ್ತಿ, ಮೂರು ಬಾರಿ ಶಾಸಕರಾಗಿ ಅನುಭವ ಹೊಂದಿದ ಬಂಗಾರಪ್ಪ ಅವರ ಗರಡಿಯಲ್ಲಿ ಪಳಗಿದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
*ಸಮುದ್ರ ಸ್ನಾನ ವಿಶೇಷ ಪೂಜೆ ಸಂಕಲ್ಪ ಹೋಮ*
ಈ ಸಂದರ್ಭದಲ್ಲಿ ಬೇಳೂರು ಅವರ ಭಾವಚಿತ್ರಗಳನ್ನು ಪ್ರದರ್ಶನ ಮಾಡಿ ಘೋಷಣೆ ಕೂಗಿ ಮಂತ್ರಿಗಿರಿ ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು ನಂತರ ಎಲ್ಲ ಪ್ರತಿನಿಧಿಗಳು ಗೋಕರ್ಣದ ಕಡಲ ತಡಿಯಲ್ಲಿ ಸಮುದ್ರ ಸ್ಥಾನ ಮಾಡಿ ಗೋಕರ್ಣ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಆನಂತರ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಗಾಯತ್ರಿ ಹೋಮ, ಸಂಕಲ್ಪ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಲಾಯಿತು.
*ರಾಜ್ಯದ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಗೆ ಹರ್ಷ*
ಎರಡು ದಿನಗಳ ಸಮಾವೇಶದಲ್ಲಿ ಭಾಗವಹಿಸಿ ಸಮುದಾಯದ ಸಂಘಟನೆಗೆ ಟೊಂಕ ಕಟ್ಟಿ ನಿಂತ ಮಹಾಮಂಡಲದ ಮುಖಂಡರು ನಿಜಕ್ಕೂ ಪ್ರಶಂಸ ನಾರ್ಹರು. ಸಮಾಜದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಎಂದು ಸಮಾವೇಶವನ್ನು ಉದ್ಘಾಟನೆ ಮಾಡಿದ ಚಿತ್ತಾಪುರ ಬ್ರಹ್ಮಶ್ರೀ ನಾರಾಯಣಪುರು ಶಕ್ತಿಪೀಠದ ಧರ್ಮದರ್ಶಿ ಹಾಗೂ ಉದ್ಯಮಿಗಳಾದ ವೆಂಕಟೇಶ ಎಂ ಕಡೇಚೂರ್ ಹೇಳಿದರು.
*ವಿಶೇಷ ಉಪನ್ಯಾಸ*
ಎರಡು ದಿನಗಳ ಸಮಾವೇಶದಲ್ಲಿ ವಿಶೇಷ ಚರ್ಚೆ, ಉಪನ್ಯಾಸ ನಡೆಯಿತು. ಸಮಾಜ, ಸಂಘಟನೆ, ಆರ್ಥಿಕ ಸಂಪನ್ಮೂಲ ಈ ಕುರಿತಾಗಿ ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಲಕ್ಷ್ಮಿ ನರಸಯ್ಯ ಹಾಗೂ ರಾಜಕೀಯ ಶಕ್ತಿಗಳ ಕ್ರೋಢೀಕರಣ ಬಗ್ಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಬ್ರಹ್ಮ ಶ್ರೀ ನಾರಾಯಣ ಗುರುಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ
ಡಾ.ಸದಾನಂದ ಪೆರ್ಲ ವಿಶೇಷ ಉಪನ್ಯಾಸ ನೀಡಿದರು. ಸಭೆಯಲ್ಲಿ ಮಹಾಮಂಡಲದ ರಾಜ್ಯಾಧ್ಯಕ್ಷರಾದ ತಿಪ್ಪೇಶ್, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಕುಪೇಂದ್ರ ಗುತ್ತೇದಾರ್ ನಾಗೂರ್, ನ್ಯಾಯವಾದಿ ವಿಕ್ರಮ್ ಆರ್ ಎಲ್ ನಾಯಕ್ ಕುಮಟಾ,ಮಾಜಿ ಮಹಾಮಂಡಲದ ಮಾಜಿ ರಾಜ್ಯಾಧ್ಯಕ್ಷರಾದ ಮಂಚೇಗೌಡ, ಶ್ರೀಮತಿ ಯಶೋದಮ್ಮ ತೇಜಸ್ವಿ ನಾಯಕ್ ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ ಸಂತೋಷ್ ಚೌಧರಿ, ಮಂಜುಳಾ ನಾಯಕ್, ತೇಜಸ್ವಿ ನಾಯಕ್,ವರ್ಧನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಿರ್ಣಯಕ್ಕೆ ಒಪ್ಪಿಗೆ
ರಾಷ್ಟ್ರೀಯ ಈಡಿಗ ಮಹಾಮಂಡಲದ ವಾರ್ಷಿಕ ಸಭೆಯಲ್ಲಿ ರಾಜ್ಯದ 20 ಜಿಲ್ಲೆಗಳ ಪದಾಧಿಕಾರಿಗಳು ಪಾಲ್ಗೊಂಡು ರಾಜ್ಯಾಧ್ಯಕ್ಷರಾದ ತಿಪ್ಪೇಶ್ ಅವರು ಮಂಡಿಸಿದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಬೇಳೂರು ಅವರಿಗೆ ಸಚಿವ ಸ್ಥಾನ, ರಾಜ್ಯದ 250 ಕಡೆ ಕನಿಷ್ಠ 500 ಜನರನ್ನು ಸೇರಿಸಿ ಚಿಂತನಾ ಸಭೆ, ರಾಜ್ಯದ ನಾಲ್ಕು ಕಡೆಗಳಲ್ಲಿ ರಾಜಕೀಯ ಶಕ್ತಿ ಕ್ರೋಢೀಕರಣಕ್ಕಾಗಿ ವಿಶೇಷ ಸಭೆಸಮಾಜಕ್ಕೆ ರಾಜಕೀಯ ಸ್ಥಾನ ನೀಡಿಕೆ ಮುಂತಾದ ನಿರ್ಣಯಗಳನ್ನು ಅಂಗೀಕರಿಸಲಾಯಿತು.
